-->
SBIಗೆ 73 ಲಕ್ಷ ವಂಚನೆ: ಮ್ಯಾನೇಜರ್, ಖಾತೆದಾರ ಸಹಿತ ಹಲವರ ವಿರುದ್ಧ ಪ್ರಕರಣ ದಾಖಲು

SBIಗೆ 73 ಲಕ್ಷ ವಂಚನೆ: ಮ್ಯಾನೇಜರ್, ಖಾತೆದಾರ ಸಹಿತ ಹಲವರ ವಿರುದ್ಧ ಪ್ರಕರಣ ದಾಖಲು

ಲೋಕಬಂಧು ನ್ಯೂಸ್, ಮಲ್ಪೆ
ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್.ಬಿ.ಐ)ನ ಮಲ್ಪೆ ಶಾಖೆ ಮ್ಯಾನೇಜರ್ ಸೇರಿದಂತೆ ಇತರರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕಿನ ಲಕ್ಷಾಂತರ ರೂ. ಹಣವನ್ನು ದುರುಪಯೋಗಪಡಿಸಿ ವಂಚಿಸಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೌಸಿಂಗ್ ಫೈನಾನ್ಸ್ ಕಂಪನಿಯೊಂದರಿಂದ ಬಂದ ಇಮೇಲ್ ಸಂದೇಶದಂತೆ ಬ್ಯಾಂಕಿನ ಮಲ್ಪೆ ಶಾಖೆಯಿಂದ ಸಮುದ ಸುವರ್ಣ ನಂತೂರು, ಶರ್ಮಿಳಾ ಎಸ್. ಮೂಳೂರು, ಸುಶಾಂತ್ ತಿಂಗಳಾಯ ಕೋಡಿ, ಎಂ.ರಮಾನಾಥ್ ಬೊಂದೆಲ್ ಮಂಗಳೂರು, ಸದಾನಂದ ಜಿ. ರಾವ್ ಕುಂಜಾಲು ಎಂಬ ಖಾತೆದಾರರಿಗೆ ಒಟ್ಟು 73 ಲಕ್ಷ ರೂ. ಹಣ ವರ್ಗಾವಣೆಯಾಗಿರುವ ಬಗ್ಗೆ ಆ.25ರಂದು ಎಸ್.ಬಿಐ ಮುಂಬೈ ಶಾಖೆಯಿಂದ ವಿವರವನ್ನು ಮಲ್ಪೆ ಶಾಖೆಯ ಮ್ಯಾನೇಜರ್ ರಾಜೇಶ್ ಗಣಪತಿ ಅವರಲ್ಲಿ ಕೇಳಲಾಗಿತ್ತು.


ಅದರಂತೆ ಮ್ಯಾನೇಜರ್ ಮಲ್ಪೆ ಶಾಖೆಯಿಂದ ಆಗಿರುವ ಹಣ ವರ್ಗಾವಣೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಕಳೆದ ಆ.26ರಂದು ಮುಂಬೈ ಶಾಖೆಗೆ ಸಲ್ಲಿಸಿದ್ದರು. ಬಳಿಕ ಫೈನಾನ್ಸ್ ಕಂಪೆನಿಯಿಂದ ಅದೇ ದಿನ ಬಂದ ಇಮೇಲ್ ನಲ್ಲಿ ಕಂಪೆನಿಯಿಂದ ಹಣ ವರ್ಗಾವಣೆಗೆ ಸಂಬಂಧಿಸಿ ಯಾವುದೇ ಮನವಿಯನ್ನು ಮಲ್ಪೆ ಶಾಖೆಗೆ ಕಳುಹಿಸಿಲ್ಲ ಎಂದು ತಿಳಿಸಲಾಗಿತ್ತು.


ಈ ಬಗ್ಗೆ ಪರಿಶೀಲಿಸಿದಾಗ ಆಗ ಮಲ್ಪೆ ಶಾಖೆಯಲ್ಲಿ ಶಾಖಾ ಮ್ಯಾನೇಜರ್ ಆಗಿದ್ದ ಮೀರಾ ಪಲ್ಲವಿ ಟಿ.ಎಚ್., ಖಾತೆದಾರರು ಮತ್ತು ಇತರರು ಸೇರಿ ನಕಲಿ ದಾಖಲೆ ಸೃಷ್ಟಿಸಿ ಆ.11ರಿಂದ ಆ.22ರ ಮಧ್ಯಾವಧಿಯಲ್ಲಿ ಒಟ್ಟು 73 ಲಕ್ಷ ರೂ. ಬ್ಯಾಂಕಿನ ಹಣವನ್ನು ದುರುಪಯೋಗಪಡಿಸಿ ಸ್ವಂತಕ್ಕೆ ಬಳಸಿ ಬ್ಯಾಂಕಿಗೆ ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿರುವುದಾಗಿ ದೂರಲಾಗಿದೆ.

Ads on article

Advertise in articles 1

advertising articles 2

Advertise under the article