
Udupi: ಆ.30ರಂದು ಮಿಷನ್ ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್ ಪರೀಕ್ಷಾ ಘಟಕ ಉದ್ಘಾಟನೆ
Thursday, August 28, 2025
ಲೋಕಬಂಧು ನ್ಯೂಸ್, ಉಡುಪಿ
ಇಲ್ಲಿನ ಮಿಷನ್ ಕಾಂಪೌಂಡ್'ನ ಸಿ.ಎಸ್.ಐ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್ ಪರೀಕ್ಷಾ ಘಟಕ (ಮ್ಯಾಮೋಗ್ರಫಿ ಯುನಿಟ್) ಆ. 30ರಂದು ಬೆಳಿಗ್ಗೆ 10 ಗಂಟೆಗೆ ಆಸ್ಪತ್ರೆಯ ಚಾನೆಲ್‌ನಲ್ಲಿ ನಡೆಯಲಿದೆ ಎಂದು ಮಿಷನ್ ಆಸ್ಪತ್ರೆಯ ನಿರ್ದೇಶಕ ಡಾ. ಸುಶೀಲ್ ಜತ್ತನ್ನ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ನೂತನ ಘಟಕವನ್ನು ಉದ್ಘಾಟಿಸಲಿದ್ದಾರೆ. ಸಿಎಸ್ಐ, ಕೆಎಸ್ ಡಿ ಖಜಾಂಚಿ ಐವನ್ ಡಿ'ಸೋನ್ಸ್ ಮುಖ್ಯ
ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಭಾರತಿ ಹೇಮಚಂದ್ರ, ಡಾ.ದೀಪಾ ರಾವ್, ತನುಜಾ ಮಾಬೆನ್ ಗೌರವ ಅತಿಥಿಗಳಾಗಿದ್ದಾರೆ ಎಂದರು.
ಈ ಘಟಕ ಮಹಿಳೆಯರಲ್ಲಿ ಕ್ಯಾನ್ಸರ್'ನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚಿ ತಡೆಗಟ್ಟುವಲ್ಲಿ ವಿಶೇಷವಾಗಿ ಉಡುಪಿ ಹಾಗೂ ಸುತ್ತಮುತ್ತಲಿನ ಕರಾವಳಿ ಮತ್ತು ಗ್ರಾಮೀಣ ಪ್ರದೇಶಗಳ ಮಹಿಳೆಯರ ಆರೋಗ್ಯ ಸುಧಾರಣೆಯಲ್ಲಿ ಬಹಳಷ್ಟು ಸಹಕಾರಿಯಾಗಲಿದೆ.
ಇದು ಸಾರ್ವಜನಿಕ ಆರೋಗ್ಯ ಹಾಗೂ ರೋಗ ತಡೆಗಟ್ಟುವಿಕೆಯ ಆಸ್ಪತ್ರೆಯ ಸೇವೆಗಳಲ್ಲಿ ಇನ್ನೊಂದು ಮೈಲಿಗಲ್ಲಾಗಲಿದೆ ಎಂದರು.
ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಕ್ಯಾನ್ಸರ್ ಸಂಬಂಧಿತ ಮರಣಗಳಿಗೆ ಪ್ರಮುಖ ಕಾರಣವಾಗಿದ್ದು, ಪಶ್ಚಿಮ ದೇಶಗಳ ಜೊತೆ ಹೋಲಿಸಿದರೆ ಭಾರತದಲ್ಲಿ ಈ ರೋಗದಿಂದ ಸಾವಿನ ಪ್ರಮಾಣ ಹೆಚ್ಚು. ಆದರೆ, ಸಮಯೋಚಿತ ತಪಾಸಣೆ ಮತ್ತು ಪತ್ತೆ ಹಚ್ಚುವುದರಿಂದ ಈ ರೋಗವನ್ನು ನಿಯಂತ್ರಿಸಲು ಸಾಧ್ಯವಿದೆ ಎಂದರು.
ನೂತನ ಮ್ಯಾಮೋಗ್ರಫಿ ಘಟಕದಲ್ಲಿ ಕೈಗೆಟುಕುವ ದರದಲ್ಲಿ ಸ್ತನ ಕ್ಯಾನ್ಸರ್ ತಪಾಸಣೆ ನಡೆಸಲಾಗುವುದು. ಅಲ್ಲದೆ, ಆರಂಭಿಕ ಹಂತದಲ್ಲಿ ರೋಗ ಪತ್ತೆ ಹಚ್ಚುವ ಮೂಲಕ ಮರಣ ಪ್ರಮಾಣ ಕಡಿಮೆ ಮಾಡುವುದು ಮತ್ತು ಚಿಕಿತ್ಸೆಯ ಫಲಿತಾಂಶವನ್ನು ಉತ್ತಮಗೊಳಿಸಲಾಗುವುದು. ಹಾಗೆಯೇ ಮಹಿಳಾ ಆರೋಗ್ಯ ಮತ್ತು ತಡೆಯಬಹುದಾದ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ಘಟಕದ ಮುಖ್ಯ ಉದ್ದೇಶ ಎಂದರು.
ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಪಿಆರ್.ಓ ರೋಹಿ ರತ್ನಾಕರ್, ಆಪರೇಶನ್ ಮ್ಯಾನೇಜರ್ ಕಾವ್ಯಶ್ರೀ ಶೆಟ್ಟಿ ಇದ್ದರು.