
Udupi: ಯುವಜನತೆಯಲ್ಲಿ ಆಧ್ಯಾತ್ಮಿಕ ಒಲವು ಮೂಡಿಸಿದ ಬನ್ನಂಜೆ
Sunday, August 3, 2025
ಲೋಕಬಂಧು ನ್ಯೂಸ್, ಉಡುಪಿ
ಪ್ರವಚನಗಳು ಹಾಗೂ ಕೃತಿಗಳ ಮೂಲಕ ಜನಸಾಮಾನ್ಯರಿಗೂ ಭಾರತೀಯ ತತ್ವಶಾಸ್ತ್ರವನ್ನು ಪರಿಚಯಿಸುವುದರ ಜೊತೆಗೆ ಯುವ ಜನತೆಯಲ್ಲಿ ಆಧ್ಯಾತ್ಮಿಕ ಒಲವು ಮೂಡಿಸಿದ ಚುಂಬಕಶಕ್ತಿ ಬನ್ನಂಜೆ ಗೋವಿಂದಾಚಾರ್ಯ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ವೇದವ್ಯಾಸಾಚಾರ್ಯ ಶ್ರೀಶಾನಂದರಿಂದ ಬಣ್ಣಿಸಿದರು.
ಬೆಂಗಳೂರಿನ ಬನ್ನಂಜೆ ಗೋವಿಂದ ಆಚಾರ್ಯ ಪ್ರತಿಷ್ಠಾನ ಸಹಕಾರದೊಂದಿಗೆ ಪರ್ಯಾಯ ಪುತ್ತಿಗೆ ಮಠ ಹಾಗೂ ಎಂಜಿಎಂ ಕಾಲೇಜು ಉಡುಪಿ ಸಹಯೋಗದೊಂದಿಗೆ ಭಾನುವಾರ ಎಂಜಿಎಂ ಕಾಲೇಜು ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ವಿದ್ಯಾವಾಚಸ್ಪತಿ ಪದ್ಮಶ್ರೀ ಬನ್ನಂಜೆ ಗೋವಿಂದಾಚಾರ್ಯ ನೆನಪಿನ `ಬನ್ನಂಜೆ 90 ಉಡುಪಿ ನಮನ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ವಾಧ್ಯಾಯದ ಮೂಲಕ ವಾಙ್ಮಯ ಜಗತ್ತನ್ನು ಪ್ರವೇಶಿಸಿ ಸೈ ಎನಿಸಿದ ಆಚಾರ್ಯರು ಮಾಧ್ವ ತತ್ವದ ಜೊತೆಗೆ ಇತರ ತತ್ವಗಳನ್ನೂ ಅರಿತು ತನ್ನ ಪರಂಪರಾಗತ ನಂಬಿಕೆಯನ್ನು ಪ್ರತಿಪಾದಿಸುತ್ತಿದ್ದರು. ವಾಕ್ಯಾರ್ಥಸಭೆಗಳಲ್ಲಿ ಪ್ರತಿವಾದಿಯ ವ್ಯಕ್ತಿತ್ವ ಅಥವಾ ವ್ಯಕ್ತಿಗಿಂತ ಸತ್ಯದ ಪ್ರತಿಪಾದನೆಯಾಗಬೇಕು ಎಂದು ಆಶಿಸಿದ್ದವರು.
ದೇವರಲ್ಲಿ ಅಚಲ ನಂಬಿಕೆ ಇರಿಸಿಕೊಂಡಿದ್ದ ಅವರು ವಿಶ್ವ ಮಾನವನಾಗಿ ಬೆಳೆದರು. ಕಾಯಕದ ಮೂಲಕ ಅಜರಾಮರರಾದವರು ಎಂದರು. ಅವರಿಗೆ ವಿಶ್ವ ನಮನ ಸಲ್ಲಬೇಕು ಎಂದು ಪ್ರತಿಪಾದಿಸಿದರು.
ಅಧ್ಯಕ್ಷತೆ ವಹಿಸಿದ್ದ ತರಂಗ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಪೈ, ಬನ್ನಂಜೆಯವರ ಛಾಯಾಚಿತ್ರ ಹಾಗೂ ಅವರು ಬಳಸುತ್ತಿದ್ದ ವಸ್ತುಗಳ ಪ್ರದರ್ಶನ ಉದ್ಘಾಟಿಸಿದರು.
ಬ್ರಿಟಿಷರ ಪ್ರಭಾವದಿಂದ ಉಪೇಕ್ಷೆಗೊಳಗಾಗಿದ್ದ ಭಾರತೀಯ ತತ್ವ ಸಿದ್ಧಾಂತವನ್ನು ಆಧುನಿಕ ಕಾಲಕ್ಕೆ ಸರಿಯಾಗಿ ಪ್ರತಿಪಾದಿಸಿದವರು ಬನ್ನಂಜೆ ಎಂದರು.
ಶಾಸಕ ಯಶಪಾಲ್ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್, ಎಂಜಿಎಂ ಕಾಲೇಜು ಪ್ರಾಂಶುಪಾಲೆ ಪ್ರೊ.ವನಿತಾ ಮಯ್ಯ, ಗಾಂಧಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಹರಿಶ್ಚಂದ್ರ, ವಿಶ್ವ ಸಂಸ್ಕೃತಿ ಪ್ರತಿಷ್ಠಾನ ಗೌರವಾಧ್ಯಕ್ಷ ವಿಶ್ವನಾಥ ಶೆಣೈ, ಕನ್ನಡ ಕೀಲಿಮಣೆ ಸಂಶೋಧಕ ಪ್ರೊ.ಕೆ.ಪಿ.ರಾವ್, ಬನ್ನಂಜೆ ನಮನ ಪ್ರಧಾನ ಸಂಚಾಲಕ ರವಿರಾಜ್ ಎಚ್.ಪಿ., ಡಾ.ವೀಣಾ ಬನ್ನಂಜೆ ವೇದಿಕೆಯಲ್ಲಿದ್ದರು.
ಸಮಿತಿ ಕಾರ್ಯದರ್ಶಿ ಆಸ್ಟ್ರೋಮೋಹನ್ ಸ್ವಾಗತಿಸಿ, ಸಂಚಾಲಕ ಜನಾರ್ದನ ಕೊಡವೂರು ವಂದಿಸಿದರು. ಬನ್ನಂಜೆ ಪ್ರತಿಷ್ಠಾನ ಅಧ್ಯಕ್ಷ ಡಾ. ಮಲ್ಲೇಪುರಂ ಜಿ. ವೆಂಕಟೇಶ್ ಪ್ರಸ್ತಾವನೆಗೈದರು.
ಬನ್ನಂಜೆ ಕುರಿತ ಗೋಷ್ಠಿಗಳಲ್ಲಿ ಬ್ರಹ್ಮಣ್ಯಾಚಾರ್ಯ, ಪಾದೆಕಲ್ಲು ಡಾ.ವಿಷ್ಣುಭಟ್, ನಿತ್ಯಾನಂದ ಪಡ್ರೆ, ಪ್ರೊ.ಎಂ.ಎಲ್.ಸಾಮಗ, ಹಾಗೂ ಡಾ.ಗಣನಾಥ ಎಕ್ಕಾರು ಭಾಗವಹಿಸಿದ್ದರು.
ಸಂಗೀತ ಕಲಾವಿದ ಡಾ. ವಿದ್ಯಾಭೂಷಣ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಗಂಗಾವತಿ ಪ್ರಾಣೇಶ್ ಸಮಾಪನ ನುಡಿಗಳನ್ನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮ, ತಿಂಗಳೆ ಪ್ರತಿಷ್ಠಾನ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಸಂಶೋಧಕಿ ಡಾ.ಉಷಾ ಚಡಗ, ನಿವೃತ್ತ ಬ್ಯಾಂಕ್ ಪ್ರಬಂಧಕ ನಾರಾಯಣ ಮಡಿ, ಹಾಸ್ಯ ಕಲಾವಿದ ಮಾಮನಿ, ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಇದ್ದರು.
ಯಕ್ಷಗಾನ ಕಲಾರಂಗ ಕಾರ್ಯದರ್ಶಿ ಮುರಳಿ ಕಡೆಕಾರ್ ಸ್ವಾಗತಿಸಿ, ಬನ್ನಂಜೆ ಪ್ರತಿಷ್ಠಾನದ ಡಾ.ವೀಣಾ ಬನ್ನಂಜೆ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ವಿದ್ಯಾಭೂಷಣರಿಂದ ಆಚಾರ್ಯ ವಿರಚಿತ ಹಾಡುಗಳ 'ನಾದಲಹರಿ' ನಡೆಯಿತು.
ಬೆಳಿಗ್ಗೆ 8 ಗಂಟೆಗೆ ಬನ್ನಂಜೆ ಅವರ ಮೂಡುಬೆಟ್ಟಿನ ಮೂಲ ಮನೆಯ ಬ್ರಹ್ಮಸ್ಥಾನ ಮತ್ತು ನಾಗಸನ್ನಿಧಿಯಲ್ಲಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು, ಬನ್ನಂಜೆ ಕಲಿತ ಆದಿವುಡುಪಿ ಶಾಲೆಯಿಂದ ಬನ್ನಂಜೆ ಭಾವಚಿತ್ರದ ಮೆರವಣಿಗೆ ಎಂಜಿಎಂ ಕಾಲೇಜು ವರೆಗೆ ಸಾಗಿತು. ನಾಡೋಜ ಪ್ರೊ.ಕೆ.ಪಿ. ರಾವ್ ಮೆರವಣಿಗೆಗೆ ಚಾಲನೆ ನೀಡಿದರು.
ಬನ್ನಂಜೆ ಕೃತಿ ಆಧರಿತ ಯಕ್ಷಗಾನ ಪ್ರಸ್ತುತಿ, ಕವಿತಾ ಉಡುಪ ಹಾಗೂ ಸುಮಾ ಶಾಸ್ತ್ರಿ ಅವರಿಂದ ಬನ್ನಂಜೆಯವರ ಕವಿತೆಗಳ ಗೀತ ಗಾಯನ ನಡೆಯಿತು.