
Udupi: ಸ್ತನ ಕ್ಯಾನ್ಸರ್ ಜಾಗೃತಿ ಅಗತ್ಯ
Saturday, August 30, 2025
ಲೋಕಬಂಧು ನ್ಯೂಸ್, ಉಡುಪಿ
ಸ್ತನ ಕ್ಯಾನ್ಸರ್ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಸಿಎಸ್ಐ ಲೊಂಬಾರ್ಡ್ ಸ್ಮಾರಕ ಆಸ್ಪತ್ರೆ ಸ್ತನ ಕ್ಯಾನ್ಸರ್ ಪರೀಕ್ಷಾ ಘಟಕ (ಮ್ಯಾಮೋಗ್ರಫಿ)ವನ್ನು ಸ್ಥಾಪಿಸುವ ಮೂಲಕ ಈ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದರು.
ನಗರದ ಮಿಷನ್ ಕಂಪೌಂಡ್'ನ ಸಿಎಸ್ಐ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯ ಸ್ತನ ಕ್ಯಾನ್ಸರ್ ಪರೀಕ್ಷಾ ಘಟಕವನ್ನು ಶನಿವಾರ ಉದ್ಘಾಟಿಸಿ, ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಿಎಸ್ಐ ಕೆಎಸ್.ಡಿ ಖಜಾಂಚಿ ಐವನ್ ಡಿ'ಸೋನ್ಸ್ ಮಾತನಾಡಿ ತಾಯಿ, ಮಗುವಿನ ಆರೈಕೆಯ ಧ್ಯೇಯದಿಂದ ಆರಂಭವಾಗಿರುವ ಆಸ್ಪತ್ರೆ ಇಂದು ಮಹಿಳಾ ಸಬಲೀಕರಣಕ್ಕಾಗಿಯೂ ಕಾರ್ಯನಿರ್ವಹಿಸುತ್ತಿದೆ ಎಂದರು.
ಆಸ್ಪತ್ರೆಯ ನಿರ್ದೇಶಕ ಡಾ.ಸುಶಿಲ್ ಜತ್ತನ್ನ ಮಾತನಾಡಿ, ಮಿಷನ್ ಆಸ್ಪತ್ರೆ ಬೇರೆ ಬೇರೆ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದರೂ ಲಾಭದಾಯಕವಲ್ಲದ ಮ್ಯಾಮೋಗ್ರಫಿ ಘಟಕವನ್ನು ಸಾಮಾಜಿಕ ಬದ್ಧತೆಯಿಂದ ಆರಂಭಿಸಿದೆ ಎಂದರು.
ಮಹಿಳೆಯರಲ್ಲಿ ಕಂಡುಬರುವ ಕ್ಯಾನ್ಸರ್'ಗಳಲ್ಲಿ ಸ್ತನ ಕ್ಯಾನ್ಸರ್ ಸಾಮಾನ್ಯವಾಗಿದ್ದು, 50 ವರ್ಷದೊಳಗಿನವರಲ್ಲೂ ಇದು ಕಂಡುಬರುತ್ತಿರುವುದು ಕಳವಳಕಾರಿ ಸಂಗತಿ ಎಂದರು.
ಭಾರತಿ ಹೇಮಚಂದ್ರ, ಡಾ.ದೀಪಾ ರಾವ್, ತನುಜಾ ಮಾಬೆನ್ ಉಪಸ್ಥಿತರಿದ್ದರು.
ಡಾ.ಸುಜಾ ಕರ್ಕಡ ಸ್ವಾಗತಿಸಿದರು. ಶೈವಲ್ಯ ದೇವಾಡಿಗ ವಂದಿಸಿದರು. ಪಿಆರ್.ಓ ರೋಹಿ ರತ್ನಾಕರ್ ಸಹಕರಿಸಿದರು.