
Udupi: ಕೃಷ್ಣನಿಗೆ ವಿಶ್ವರೂಪ ಕವಚ ಸಮರ್ಪಿಸಿ ವರ್ಧಂತಿ ಆಚರಣೆ
Saturday, August 30, 2025
ಲೋಕಬಂಧು ನ್ಯೂಸ್, ಉಡುಪಿ
ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ 64ನೇ ಜನ್ಮನಕ್ಷತ್ರ (ವರ್ಧಂತಿ) ಅಂಗವಾಗಿ ಶನಿವಾರ ಶ್ರೀಕೃಷ್ಣನಿಗೆ ವಿಶ್ವರೂಪ ದರ್ಶನ ಅಲಂಕಾರದ ಚಿನ್ನದ ಕವಚ ತೊಡಿಸಲಾಯಿತು.
ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಕವಚವನ್ನು ಶ್ರೀಕೃಷ್ಣನಿಗೆ ತೊಡಿಸಿದರು. ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಶ್ರೀಕೃಷ್ಣನಿಗೆ ವಿಶ್ವತೋಮುಖಃ ಅಲಂಕಾರ ಮಾಡಿದರು. ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮಹಾಪೂಜೆ ನಡೆಸಿದರು.
ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ವಿಶ್ವರೂಪ ದರ್ಶನದ ಚಿನ್ನದ ಕವಚವನ್ನು ಶುಕ್ರವಾರ ಮೆರವಣಿಗೆ ಮೂಲಕ ಶ್ರೀಮಠಕ್ಕೆ ತರಲಾಗಿತ್ತು. ಶ್ರೀಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನಾಚಾರ್ಯ ಮೊದಲಾದವರಿದ್ದರು.
ಕಾರ್ಯಕ್ರಮದಂಗವಾಗಿ ಧನ್ವಂತ್ರಿ ಹೋಮ, ವಿರಜಾ ಹೋಮ, ಆಯುಷ್ಯ ಹೋಮ ಇತ್ಯಾದಿ ಹವನಾದಿಗಳನ್ನು ನಡೆಸಲಾಯಿತು. ಶ್ರೀಕೃಷ್ಣನಿಗೆ ಲಕ್ಷ ತುಳಸಿ ಅರ್ಚನೆ ಮಾಡಲಾಯಿತು.