-->
Udupi: ಸ್ತನ್ಯಪಾನದಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿ

Udupi: ಸ್ತನ್ಯಪಾನದಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿ

ಲೋಕಬಂಧು ನ್ಯೂಸ್, ಉಡುಪಿ
ಸ್ತನ್ಯಪಾನ ಮಗುವಿನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಪೂರಕವಾದ ಸಮತೋಲಿತ ಪೂರ್ಣ ಆಹಾರವಾಗಿದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸ್ತನ್ಯಪಾನ ಅವಶ್ಯಕ ಎಂದು ಜಿಲ್ಲಾ ಸರ್ಜನ್ ಡಾ.ಅಶೋಕ್ ಎಚ್. ಹೇಳಿದರು.ನಗರದ ಸರಕಾರಿ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ ಉಡುಪಿ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಜಿಲ್ಲಾ ಮಟ್ಟದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಸ್ತನ್ಯಪಾನ ಮಾಡುವುದು ತಾಯಿ ಹಾಗೂ ಮಗುವಿನ ಆರೋಗ್ಯದ ದೃಷ್ಟಿಯಿಂದ ಬಹುಮುಖ್ಯ. ಸ್ತನ್ಯಪಾನದಿಂದ ಪ್ರತೀವರ್ಷ ವಿಶ್ವದಾದ್ಯಂತ 8 ಲಕ್ಷ ಮಕ್ಕಳ ಜೀವ ಉಳಿಸಲು ಸಾಧ್ಯ ಇದೆ ಎಂದರು.


ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಜ್ಯೋತ್ಸ್ಯಾ ಬಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ತಾಯಿಯ ಹಾಲು ನೀಡುವುದರಲ್ಲಿ ಹೂಡಿಕೆ ಮಾಡಿದರೆ ಮಕ್ಕಳ ಆರೋಗ್ಯಕರ ಭವಿಷ್ಯಕ್ಕಾಗಿ ಹೂಡಿಕೆ ಮಾಡಿದಂತೆ ಎಂಬುದು ಈ ವರ್ಷದ  ಘೋಷವಾಕ್ಯವಾಗಿದ್ದು, ಪ್ರತಿವರ್ಷ ಆ. 1ರಿಂದ 7ರ ವರೆಗೆ ಜಾಗತಿಕ ಮಟ್ಟದಲ್ಲಿ ಸಪ್ತಾಹವನ್ನು ಆಚರಿಸಿ ಅರಿವು ಹಾಗೂ ಇನ್ನಿತರ ಆರೋಗ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ.


ಮಗು ಜನಿಸಿದ ಒಂದು ಗಂಟೆಯೊಳಗೆ ಎದೆಹಾಲನ್ನು ನೀಡಬೇಕು. ಆರು ತಿಂಗಳ ವರೆಗೆ ಎದೆಹಾಲನ್ನಲ್ಲದೆ ಬೇರೆ ಯಾವುದೇ ಆಹಾರ ನೀಡಬಾರದು. ಎರಡು ವರ್ಷದ ವರೆಗೆ ಅದನ್ನು ಮುಂದುವರಿಸಬೇಕು. ಮಗುವಿಗೆ ಆರು ತಿಂಗಳ ನಂತರ ಪೂರಕ ಆಹಾರ ನೀಡಲು ಪ್ರಾರಂಭಿಸಬೇಕು ಎಂದರು.


ಪ್ರಸೂತಿ ತಜ್ಞೆ ಡಾ.ಕವಿತಾ ಮಾತನಾಡಿ, ತಾಯಿಯ ಎದೆಹಾಲಿನಲ್ಲಿರುವ ಪ್ರೋಟೀನ್ ಮಗುವಿನ ಮೆದುಳಿನ ಬೆಳವಣಿಗೆಗೆ ಅತೀ ಅವಶ್ಯಕ. ಸ್ತನ್ಯಪಾನ ಮಕ್ಕಳ ಬುದ್ಧಿಮಟ್ಟ ಚುರುಕುಗೊಳಿಸುದಲ್ಲದೆ ಮುಂಬರುವ ದೀರ್ಘಕಾಲದ ಕಾಯಿಲೆಗಳನ್ನು ತಡೆಗಟ್ಟುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ತಾಯಿ ಮಗುವಿನ ಬಾಂಧವ್ಯ ವೃದ್ಧಿಯಾಗುತ್ತದೆ. ತಾಯಿಗೆ ಸ್ತನ ಕ್ಯಾನ್ಸರ್'ನಿಂದ ರಕ್ಷಣೆ ಸಿಗುತ್ತದೆ ಎಂದರು.


ಮಕ್ಕಳ ತಜ್ಞ ಡಾ.ಮಹಾದೇವ ಭಟ್ ಮಾತನಾಡಿದರು.


ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಜಗೋಪಾಲ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.


ಈ ಸಂದರ್ಭದಲ್ಲಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಅಮರನಾಥ ಶಾಸ್ತ್ರಿ, ಡಾ.ಸಂದೀಪ್, ಪ್ರಸೂತಿ ತಜ್ಞೆ ಡಾ.ಉಷಾ ಭಟ್, ಕಾರ್ಯಕ್ರಮ ವ್ಯವಸ್ಥಾಪಕ ಪ್ರೀತಮ್, ಜಿಲ್ಲಾ ಲೆಕ್ಕಪತ್ರ ವ್ಯವಸ್ಥಾಪಕ ಗಿರೀಶ್ ಕಡ್ಡಿಪುಡಿ ಮೊದಲಾದವರಿದ್ದರು.


ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ನಿರೂಪಿಸಿ, ಜಿಲ್ಲಾ ಕಾರ್ಯಕ್ರಮ ಸಂಯೋಜಕ ಸುಧೀಂದ್ರ ವಂದಿಸಿದರು.

Ads on article

Advertise in articles 1

advertising articles 2

Advertise under the article