Udupi: ಏಕ ನಿವೇಶನ ನಕ್ಷೆ ಅನುಮೋದನೆಗೆ ವಿನಾಯಿತಿ
Sunday, August 3, 2025
ಲೋಕಬಂಧು ನ್ಯೂಸ್, ಉಡುಪಿ
ಜಿಲ್ಲೆಯಲ್ಲಿ ಏಕ ನಿವೇಶನ ನಕ್ಷೆ ಅನುಮೋದನೆಗಾಗಿ ಈಗಾಗಲೇ ಕೆಲವೊಂದು ವಿನಾಯಿತಿಗಳನ್ನು ಸರ್ಕಾರ ಸಾರ್ವಜನಿಕರ ಹಿತದೃಷ್ಟಿಯಿಂದ ನೀಡಿ, ಸುತ್ತೋಲೆ ಹೊರಡಿಸಿದೆ. ನಿಯಮಾನುಸಾರ ಅದರ ಅನುಷ್ಠಾನ ಮಾಡುವಂತೆ ಗ್ರಾಮಾಂತರ ಯೋಜನೆ ಇಲಾಖೆ ಅಭಿಯಂತರರಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸೂಚನೆ ನೀಡಿದರು.ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಏಕ ನಿವೇಶನ ನಕ್ಷೆ ಹಾಗೂ ನಮೂನೆ 9/11ರಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರಾವಳಿ ಪ್ರದೇಶಗಳ ಭೌಗೋಳಿಕ ಲಕ್ಷಣಗಳಿಂದಾಗಿ ಹಲವು ಸಂದರ್ಭಗಳಲ್ಲಿ ರಸ್ತೆಗಳ ಅಗಲ ವಿಸ್ತರಿಸಲು ಸಾಧ್ಯವಾಗುವುದಿಲ್ಲ. ಅಂಥ ಸಂದರ್ಭದಲ್ಲಿ ಸಕ್ಷಮ ಪ್ರಾಧಿಕಾರಗಳಿಂದ ವಿನ್ಯಾಸ ಅನುಮೋದನೆ ಸಮಯದಲ್ಲಿ ವಿನಾಯಿತಿ ನೀಡಲು ಅವಕಾಶ ನೀಡಿ ಸರಕಾರ ಸುತ್ತೋಲೆ ಹೊರಡಿಸಿದೆ.
ಏಕ ವಿನ್ಯಾಸ ನಕ್ಷೆ ಹಾಗೂ ನಮೂನೆ 9/11ನ್ನು ಪಡೆಯಲು ಜನಸಾಮಾನ್ಯರು ಸಂಬಂಧಿಸಿದ ಇಲಾಖೆಗಳಿಗೆ ಅರ್ಜಿ ಸಲ್ಲಿಸಿದರೂ ಅವುಗಳನ್ನು ಪಡೆಯಲು ವಿಳಂಬವಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿದ್ದು, ಆದ್ಯತೆಯ ಮೇರೆಗೆ ಅರ್ಜಕ ವಿಲೇವಾರಿ ಮಾಡಬೇಕು ಎಂದರು.
ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಸರಕಾರ ಆಡಳಿತಾತ್ಮಕ ದೃಷ್ಟಿ ಸೇರಿದಂತೆ ಜಿಲ್ಲೆಯ ಸ್ಥಳೀಯ ಭೌಗೋಳಿಕ ಪ್ರದೇಶವನ್ನು ಪರಿಗಣಿಸಿ ಕೆಲವೊಂದು ವಿನಾಯಿತಿಗಳನ್ನು ನೀಡುತ್ತದೆ.
ಅದೇ ರೀತಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಮಡಿಕೇರಿ ಜಿಲ್ಲೆಗಳಿಗೆ ಏಕ ನಿಕ್ಷೆ ವಿನ್ಯಾಸ ಅನುಮೋದನೆ ನೀಡಲು ಹಲವು ವಿನಾಯಿತಿ ನೀಡಿ, ಈ ಹಿಂದೆ ಸುತ್ತೋಲೆ ಹೊರಡಿಸಿದೆ.
ಅದರನ್ವಯ ಏಕವಿನ್ಯಾಸ ಅನುಮೋದನೆ ನೀಡಿದಲ್ಲಿ ಜಿಲ್ಲೆಯಲ್ಲಿ ಅರ್ಧಕ್ಕೂ ಹೆಚ್ಚು ಸಮಸ್ಯೆಗಳು ಬಗೆಹರಿಯುತ್ತವೆ. ಅಧಿಕಾರಿಗಳು ಅವುಗಳನ್ನು ಇಚ್ಛಾಶಕ್ತಿಯಿಂದ ಮಾಡುವುದರೊಂದಿಗೆ ಜನರಿಗೆ ನೆರವಾಗಬೇಕು. ಸರಕಾರದ ಸುತ್ತೋಲೆಗಳನ್ನು ತಮ್ಮ ಇಚ್ಛೆಗೆ ಅನುಸಾರವಾಗಿ ಅರ್ಥೈಸಿಕೊಳ್ಳುವುದು ತಪ್ಪು ಎಂದರು.
ಸಾರ್ವಜನಿಕರು ಆಸ್ತಿ ಖರೀದಿ ಮಾಡಿ, ಕ್ರಯಪತ್ರ ಸಂದರ್ಭದಲ್ಲಿ ಭೂಮಿಯ ಪೂತರ್ಿ ಭಾಗಕ್ಕೆ ಶುಲ್ಕ ಕಟ್ಟಿಸಿಕೊಳ್ಳುತ್ತಾರೆ. ಆದರೆ, ಅದರಲ್ಲಿ ರಸ್ತೆಯ ಜಾಗವೂ ಒಳಗೊಂಡಿರುತ್ತದೆ. ಇದು ಸರಿಯಲ್ಲ ಎಂದರು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ತಮ್ಮ ವಾಸಕ್ಕೆ ಸ್ವಂತ ಕಟ್ಟಡಗಳನ್ನು ಕಟ್ಟಿಕೊಳ್ಳುವ ಉದ್ದೇಶದಿಂದ ಏಕನಕ್ಷೆ ವಿನ್ಯಾಸ ಅನುಮೋದನೆ ಪಡೆಯಲು ನಗರ ಯೋಜನಾ ಪ್ರಾಧಿಕಾರದಲ್ಲಿ ಆಗುವುದಿಲ್ಲ ಎಂದು ಜನರ ಮನಸ್ಸಿನಲ್ಲಿ ಇದೆ. ಸಲ್ಲಿಕೆಯಾಗುವ ಅರ್ಜಿಗಳಲ್ಲಿ ಕಂಡುಬರುವ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ, ಪರಿಹಾರ ಕಂಡುಕೊಂಡು ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಸರಕಾರದಿಂದ ಬಡಜನರಿಗೆ 94ಸಿ ಮತ್ತಿತರ ಮಂಜೂರಾತಿಯಲ್ಲಿ ನೀಡಿದ ನಿವೇಶನಗಳಿಗೂ ಏಕನಕ್ಷೆ ನಿವೇಶನ ವಿನ್ಯಾಸ ಅನುಮೋದನೆ ಪಡೆಯಲು ತೊಂದರೆಯಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿದ್ದು, ಈಗಾಗಲೇ ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ಯಾವುದಕ್ಕೆಲ್ಲ ವಿನಾಯಿತಿಗೊಳಿಸಬಹುದೆಂಬುದನ್ನು ನಿಖರವಾಗಿ ಸೂಚಿಸಲಾಗಿದೆ. ಅದರನ್ವಯ ಅನುಮೋದನೆ ನೀಡುವುದು ಒಳಿತು ಎಂದರು.
ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ನಗರಸಭಾಧ್ಯಕ್ಷ ಪ್ರಭಾಕರ ಪೂಜಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ನಗರ ಮತ್ತು ಗ್ರಾಮಾಂತರ ಇಲಾಖೆಯ ಸಹಾಯಕ ನಿರ್ದೇಶಕಿ ರಮ್ಯಾ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಇದ್ದರು.