
Udupi: ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತದ ಸಾಧನೆ ಗಮನೀಯ
Monday, August 25, 2025
ಲೋಕಬಂಧು ನ್ಯೂಸ್, ಉಡುಪಿ
ಬಾಹ್ಯಾಕಾಶ ಕೌತುಕಗಳ ಆಗರವಾಗಿದ್ದು, ಚಂದ್ರ ಸೂರ್ಯ ಮತ್ತಿತರ ಆಕಾಶ ಕಾಯಗಳ ಅಧ್ಯಯನವನ್ನು ವಿಜ್ಞಾನಿಗಳು ನಡೆಸುತ್ತಲೇ ಬಂದಿದ್ದಾರೆ. ಬಾಹ್ಯಾಕಾಶ ಅನ್ವೇಷಣೆಯಲ್ಲಿ ದೇಶದ ಸಾಧನೆ ಸಂಭ್ರಮಿಸುವುದರೊಂದಿಗೆ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಲು ರಾಷ್ಟ್ರೀಯ ಬಾಹ್ಯಾಕಾಶ ದಿನ ಆಚರಿಸಲಾಗುತ್ತಿದೆ ಎಂದು ಡಯೆಟ್ ಪ್ರಾಂಶುಪಾಲ ಡಾ.ಅಶೋಕ್ ಕಾಮತ್ ಹೇಳಿದರು.
ಹಿರಿಯಡ್ಕದ ಪಬ್ಲಿಕ್ ಸ್ಕೂಲ್ನಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಬೆಂಗಳೂರು ಹಾಗೂ ಜಿಲ್ಲಾ ಪಂಚಾಯತ್ ಉಡುಪಿ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಸಾಧನೆ ಗಣನೀಯ ಮತ್ತು ಗಮನೀಯವಾಗಿದ್ದು ವಿಕ್ರಂ ಸಾರಾಭಾಯ್, ಹೋಮಿ ಜೆ.ಬಾಬಾ,ಯು.ಆರ್. ರಾವ್ ಮೊದಲಾದ ಸಾಧಕರನ್ನು ಈ ಸಂದರ್ಭದಲ್ಲಿ ಸ್ಮರಿಸಲೇಬೇಕು ಎಂದರು.
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ವಿಜ್ಞಾನಿ ವಿಕ್ರಂ ಪ್ರಾಸ್ತಾವಿಕವಾಗಿ ಮಾತನಾಡಿ, 2023ರ ಆ. 23ರಂದು ವಿಕ್ರಂ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ಸ್ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಕಾರ್ಯಾಚರಿಸಿದ ಚಂದ್ರಯಾನ 3ರ ಯಶಸ್ಸನ್ನು ಸ್ಮರಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾಹೆಯ ನಿವೃತ್ತ ಪ್ರೊಫೆಸರ್ ವ್ಯಾಸ ಉಪಾಧ್ಯಾಯ ಹಾಗೂ ಪಿಪಿಸಿ ಸಹಾಯಕ ಪ್ರಾಧ್ಯಾಪಕರ ಪ್ರೊ. ಚ್ಯವನ್ ಹೆಗಡೆ ದಿನದ ವಿಶೇಷತೆ ಕುರಿತು ಮಾತನಾಡಿದರು.
ಶಾಲೆಯ ಉಪ ಪ್ರಾಂಶುಪಾಲ ಪ್ರಕಾಶ್ ಪ್ರಭು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿವ್ಯ ಎಸ್., ಪ್ರಭಾರ ಪ್ರಾಂಶುಪಾಲೆ ವೀಣಾ ನಾಯಕ್ ಮೊದಲಾದವರಿದ್ದರು.