Udupi: ಗಟ್ಟಿ ಮನಸ್ಸಿನ ಕ್ರೀಡಾಳುಗಳಿಂದ ಯಶಸ್ಸು
Saturday, August 23, 2025
ಲೋಕಬಂಧು ನ್ಯೂಸ್, ಉಡುಪಿ
ಕ್ರೀಡಾಪಟುಗಳ ಮನಸ್ಸು ಗಟ್ಟಿ ಮತ್ತು ಶುದ್ಧವಾಗಿರಬೇಕು. ಆಗ ಮಾತ್ರ ಸಾಧನೆ ಸಾಧ್ಯ. ಮನಸ್ಸು ವಿಕೃತವಾಗಿದ್ದಲ್ಲಿ ಸೋಲು ಗ್ಯಾರಂಟಿ ಎಂದು ರಾಜ್ಯ ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ, ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.ಶನಿವಾರ ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ವತಿಯಿಂದ ನಗರದ ಅಜ್ಜರಕಾಡು ಜಿಲ್ಲಾ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುವ 3 ದಿನಗಳ ಕರ್ನಾಟಕ ರಾಜ್ಯ ಕಿರಿಯರ ಮತ್ತು 23ರ ವಯೋಮಿತಿಯ ರಾಜ್ಯ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿರುವ ಕ್ರೀಡಾ ಪ್ರತಿಭೆಗಳನ್ನು ಹುಡುಕಬೇಕು. ಅವರೇ ನಿಜವಾದ ಮತ್ತು ಉತ್ತಮ ಕ್ರೀಡಾಪಟುಗಳು ಎಂದರು.
ಈ ಕ್ರೀಡಾಕೂಟ ಬೆಂಗಳೂರಿನಲ್ಲಿ ನಡೆಯಬೇಕಾಗಿತ್ತು. ಆದರೆ, ವಿಪರೀತ ಮಳೆಯಿಂದಾಗಿ ಬೆಂಗಳೂರಿನಿಂದ ಉಡುಪಿಗೆ ಸ್ಥಳಾಂತರ ಮಾಡಿದೆವು. ಉಡುಪಿ ಜಿಲ್ಲೆಯಲ್ಲಿ ಕ್ರೀಡಾಕೂಟಗಳಿಗೆ ಅಗತ್ಯ ಸೌಲಭ್ಯಗಳಿವೆ. ಇನ್ನೂ ಹೆಚ್ಚಿನ ಕ್ರೀಡಾ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಜಿಲ್ಲೆಗೆ 3 ಕೋಟಿ ರೂ. ನೀಡುವುದಾಗಿ ಸಚಿವರು ಘೋಷಿಸಿದರು.
ಉಡುಪಿ ಜಿಲ್ಲೆಯಲ್ಲಿ ಹೊಸದಾಗಿ ಬಾಸ್ಕೆಟ್ ಬಾಲ್ ಅಸೋಸಿಯೇಶನ್ ಆರಂಭವಾಗಿರುವುದನ್ನು ಪ್ರಶಂಶಿಸಿದ ಸಚಿವರು, ಮಣಿಪಾಲದ ಮಾಹೆಯಲ್ಲಿ ಅಂತಾರಾಷ್ಟ್ರೀಯ ಬಾಸ್ಕೆಟ್ ಬಾಲ್ ಚಾಂಪಿಯನ್ಶಿಪ್ ನಡೆಸುವುದಾಗಿ ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಅವರಿಗೆ ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಡಾ.ಎಚ್.ಎಸ್. ಬಲ್ಲಾಳ್, ಉಡುಪಿ ಜಿಲ್ಲೆಯಲ್ಲಿ ನಡೆಯುವ ಎಲ್ಲ ಕ್ರೀಡಾ ಚಟುವಟಿಕೆಗಳಿಗೆ ಮಾಹೆಯ ಪೂರ್ಣ ಬೆಂಬಲವಿದೆ ಎಂದರು.
ಉಡುಪಿ ಶಾಸಕ ಯಶಪಾಲ್ ಸುವರ್ಣ, ನಗರಸಭಾಧ್ಯಕ್ಷ ಪ್ರಭಾಕರ ಪೂಜಾರಿ, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಉಡುಪಿ ಡಿಸಿ ಸ್ವರೂಪ ಡಿ.ಕೆ., ಎಸ್ಪಿ ಹರಿರಾಮ್ ಶಂಕರ್, ಜಿ.ಪಂ ಸಿಇಒ ಪ್ರತೀಕ್ ಬಾಯಲ್, ಎಡಿಸಿ ಅಬಿದ್ ಗದ್ಯಾಳ್ ಮೊದಲಾದವರಿದ್ದರು.
ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಹರಿಪ್ರಸಾದ್ ರೈ ಸ್ವಾಗತಿಸಿದರು. ಸಂಘಟನಾ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಕೆ.ರಘುಪತಿ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾ ಯುವಜನ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.