
Udupi:ಪುತ್ತಿಗೆ ಕಿರಿಯ ಶ್ರೀಗಳ ಸಂಭ್ರಮದ ವರ್ಧಂತಿ ಆಚರಣೆ
Monday, August 4, 2025
ಲೋಕಬಂಧು ನ್ಯೂಸ್, ಉಡುಪಿ
ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ 37ನೇ ಜನ್ಮ ನಕ್ಷತ್ರ (ವರ್ಧಂತಿ ಮಹೋತ್ಸವ)ವನ್ನು ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು.
ಜನ್ಮನಕ್ಷತ್ರ ಮಹೋತ್ಸವ ಅಂಗವಾಗಿ ಶ್ರೀಮಠದಲ್ಲಿ ವಿರಜಾ ಹೋಮ, ಜನ್ಮನಕ್ಷತ್ರ ಹೋಮ, ಧನ್ವಂತರಿ ಹೋಮ, ಸುದರ್ಶನ ಹೋಮ ಇತ್ಯಾದಿ ರಾಮದಾಸ ಭಟ್ ಕಿದಿಯೂರು ಮತ್ತು ರಾಘವೇಂದ್ರ ತಂತ್ರಿ ನೇತೃತ್ವದಲ್ಲಿ ನಡೆಯಿತು. ಹೋಮದ ಪೂರ್ಣಾಹುತಿ ಸಂದರ್ಭ ಪುತ್ತಿಗೆ ಉಭಯ ಶ್ರೀಪಾದರು ಭಾಗವಹಿಸಿದ್ದರು.
ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನಾಚಾರ್ಯ, ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಪೂರ್ವಾಶ್ರಮದ ಮಾತಾ-ಪಿತರಾದ ವಿನುತಾ ಮತ್ತು ಗುರುರಾಜ ಆಚಾರ್ಯ ಮೊದಲಾದವರಿದ್ದರು.
ಮುತ್ತಿನ ಕವಚ
ಪುತ್ತಿಗೆ ಕಿರಿಯ ಶ್ರೀಗಳ ಜನ್ಮನಕ್ಷತ್ರ ನೆನಪಿಗಾಗಿ ಶ್ರೀಕೃಷ್ಣನಿಗೆ ಮುತ್ತಿನ ಕವಚ ತೊಡಿಸಲಾಯಿತು.
ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಹಾಗೂ ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಮುತ್ತಿನ ಕವಚ ತೊಡಿಸಿದರು.
ಪ್ರತಿನಿತ್ಯ ಶ್ರೀಕೃಷ್ಣನಿಗೆ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಶ್ರೀಕೃಷ್ಣನಿಗೆ ವೈವಿಧ್ಯಮಯ ಅಲಂಕಾರ ಮಾಡುತ್ತಿದ್ದು, ವಜ್ರಕವಚಧಾರಿ ಕೃಷ್ಣನಿಗೆ ಮುತ್ತಿನ ಕವಚ ಅಲಂಕಾರ ಸೇರ್ಪಡೆಯಾದಂತಾಗಿದೆ.