
BJPಯ ಅಂಬೇಡ್ಕರ್ ಪ್ರೀತಿ ನಾಟಕ
Monday, August 4, 2025
ಲೋಕಬಂಧು ನ್ಯೂಸ್, ಉಡುಪಿ
ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಬಿಜೆಪಿಯ ಪ್ರೀತಿ ಬರೀ ನಾಟಕ. ಸಂವಿಧಾನ ಬದಲಿಸುವಷ್ಟು ಬಹುಮತ ಸಿಗುವ ವರೆಗೆ ಬಿಜೆಪಿಯವರಿಗೆ ಎಲ್ಲಾ ಜಾತಿಯವರು, ಎಲ್ಲಾ ಭಾಷೆಯವರು ಬೇಕು. ಆ ಬಳಿಕ ದೇಶದಲ್ಲಿ ಒಂದೇ ಭಾಷೆ, ಒಂದೇ ಧರ್ಮ, ಒಬ್ಬನೇ ರಾಜ ಎಂಬ ಕಾನೂನು ತಂದುಬಿಡುತ್ತಾರೆ ಎಂದು ಮಾಜಿ ಸಚಿವ ಹಾಗೂ ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಉಪಾಧ್ಯಕ್ಷ ಕಿಮ್ಮನೆ ರತ್ನಾಕರ್ ಹೇಳಿದರು.
ನಗರದ ಪುರಭವನದಲ್ಲಿ ನಡೆದ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಸಭೆಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಅಂಬೇಡ್ಕರ್ ಇಲ್ಲದೇ ಹೋಗಿದ್ದರೆ ಈ ದೇಶದ ದಲಿತರು ಹಾಗೂ ಹಿಂದುಳಿದ ವರ್ಗದವರು ಇಂದಿಗೂ ಗುಲಾಮರಂತೆ ಬದುಕಬೇಕಾಗಿತ್ತು ಎಂದರು.
ಮಾಹಿತಿಯ ಕೊರತೆ
ಸೈದ್ಧಾಂತಿಕ ಬದ್ಧತೆ ಇರುವ ನಾಯಕ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕಿರುವುದು ದೇಶದ ಸೌಭಾಗ್ಯ. ಅದೆಷ್ಟೋ ಸುಶಿಕ್ಷಿತ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರಿಗೆ ಗಾಂಧಿ, ನೆಹರು ಹಾಗೂ ಅಂಬೇಡ್ಕರ್ ಅವರಂಥ ನಾಯಕರ ಸಾಧನೆ, ಚರಿತ್ರೆ ಕುರಿತು ಮಾಹಿತಿ ಇಲ್ಲದಿರುವುದು ದೌರ್ಭಾಗ್ಯ ಎಂದು ಕಿಮ್ಮನೆ ವಿಷಾದಿಸಿದರು.
ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರಿಶ್ ಕಿಣಿ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು, ಪಕ್ಷ ಪ್ರಮುಖರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್, ದಿನೇಶ ಪುತ್ರನ್, ದಿವಾಕರ ಕುಂದರ್, ಕೆಪಿಸಿಸಿ ವಕ್ತಾರ ಮುನೀರ್ ಜನ್ಸಾಲೆ, ಪ್ರಸಾದರಾಜ್ ಕಾಂಚನ್, ಎಂ.ಎ. ಗಫೂರ್, ಸದಾಶಿವ ಅಮೀನ್ ಕಟ್ಟೆಗುಡ್ಡೆ, ರಮೇಶ್ ಕಾಂಚನ್, ಸುಕುಮಾರ್, ಐಡಾ ಗಿಬ್ಬ ಡಿ'ಸೋಜಾ, ಚಂದ್ರಿಕಾ ಶೆಟ್ಟಿ, ದಿನಕರ್ ಶೆಟ್ಟಿ ಪಳ್ಳಿ, ಶ್ರೀಧರ ಪಿ.ಎಸ್. ಇದ್ದರು.