-->
Bike rally ಮೂಲಕ ಪ್ರಜಾಪ್ರಭುತ್ವ ಜಾಗೃತಿ

Bike rally ಮೂಲಕ ಪ್ರಜಾಪ್ರಭುತ್ವ ಜಾಗೃತಿ

ಲೋಕಬಂಧು ನ್ಯೂಸ್, ಉಡುಪಿ
ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಕ್ರೀಡಾ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಉಡುಪಿಯಿಂದ ಬೆಂಗಳೂರು ವಿಧಾನಸೌಧದ ವರೆಗೆ ಆಯೋಜಿಸಿರುವ ಬೈಕ್ ರ್ಯಾಲಿಗೆ ಶಾಸಕ ಯಶಪಾಲ್ ಸುವರ್ಣ ಭಾನುವಾರ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣ ಆವರಣದಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಪ್ರಜಾಪ್ರಭುತ್ವ ಸರ್ಕಾರದ ಒಂದು ರೂಪವಾಗಿದ್ದು, ಅದರ ಆಶಯಗಳ ರಕ್ಷಣೆ ಮತ್ತು ಪಾಲನೆ ಎಲ್ಲರ ಕರ್ತವ್ಯ.


ಪ್ರಜಾಪ್ರಭುತ್ವದ ತತ್ವಗಳನ್ನು ಜಾಗೃತಗೊಳಿಸಿ ಅದರ ಮಹತ್ವ ಸಾರುವ ಸಲುವಾಗಿ ಈ ಬಾರಿ `ನನ್ನ ಮತ ನನ್ನ ಹಕ್ಕು' ಎಂಬ ಘೋಷಣೆಯೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸಾಂವಿಧಾನಿಕ ಮೌಲ್ಯಗಳನ್ನು ಬಲಪಡಿಸುವುದು ಕಾರ್ಯಕ್ರಮದ ಉದ್ದೇಶ ಎಂದರು.


ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮಾತನಾಡಿ, ಪ್ರಜಾಪ್ರಭುತ್ವದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಹಾಗೂ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವದಾದ್ಯಂತ ಸೆ. 15ರಂದು ಪ್ರಜಾಪ್ರಭುತ್ವ ದಿನಾಚರಣೆ ಮಾಡಲಾಗುತ್ತಿದೆ. ಜನರ ಸ್ವಾತಂತ್ರ್ಯ, ಸಮಾನತೆ ಹಾಗೂ ಹಕ್ಕುಗಳನ್ನು ಸಮರ್ಥಿಸಿ, ಎಲ್ಲರಿಗೂ ಸಮಾನ ಅವಕಾಶಗಳನ್ನು ದೊರಕುವಂತೆ ಮಾಡುವ ವ್ಯವಸ್ಥೆ ಪ್ರಜಾಪ್ರಭುತ್ವದ ಆಶಯ ಎಂದರು.


ಬೈಕ್ ರ್ಯಾಲಿ ಉಡುಪಿ, ಮಂಗಳೂರು, ಹಾಸನ ಮಾರ್ಗವಾಗಿ ಬೆಂಗಳೂರು ವಿಧಾನಸೌಧ ತಲುಪಲಿದ್ದು, ಯಶಸ್ವಿಯಾಗಲಿ ಎಂದು ಹಾರೈಸಿದರು.


ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾರಾಯಣಸ್ವಾಮಿ, ಸಹಾಯಕ ನಿರ್ದೇಶಕ ರೋಶನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಮೊದಲಾದವರಿದ್ದರು.

Ads on article

Advertise in articles 1

advertising articles 2

Advertise under the article