CM ಕಚೇರಿ ಮೇಲೆ ಕ್ರೈಸ್ತ ಮಿಷನರಿಗಳ ನೆರಳು
Sunday, September 21, 2025
ಲೋಕಬಂಧು ನ್ಯೂಸ್, ಉಡುಪಿ
ಮುಖ್ಯಮಂತ್ರಿ ಸಿದ್ಧರಾಮಯ್ಯ ಮೊದಲಿನ ಸಿದ್ಧರಾಮಯ್ಯ ಅಲ್ಲ. ಯಾರದೋ ಒತ್ತಡಕ್ಕೆ ಮಣಿದು ಕ್ರಿಶ್ಚಿಯನ್ ಓಲೈಕೆಯಲ್ಲಿ ತೊಡಗಿದ್ದಾರೆ. ಅವರ ಕಚೇರಿ ಮೇಲೆ ಕ್ರೈಸ್ತ ಮಿಷನರಿಗಳ ನೆರಳು ಬಿದ್ದಿದೆ ಎಂದು ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಎಚ್ಚರಿಸಿದರು.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಉದ್ದೇಶಿಸಿರುವ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಸಮೀಕ್ಷೆಯಲ್ಲಿ ಕ್ರಿಶ್ಚಿಯನ್ ಜೊತೆ 75 ಉಪಜಾತಿ 47 ಹಿಂದೂ ಉಪಜಾತಿಗಳನ್ನು ಜೋಡಿಸಲಾಗಿದೆ. ಆ ಬಗ್ಗೆ ವಿರೋಧ ವ್ಯಕ್ತವಾಗಿದ್ದರೂ ಸರಕಾರ ಅಧಿಕೃತ ಪ್ರಕಟಣೆ ನೀಡಿಲ್ಲ. ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸಬೇಕು. ಹಿಂದೂ ಜಾತಿ ಜೊತೆ ಕ್ರಿಶ್ಚಿಯನ್ ತೆಗೆಯುವ ವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.
ಸಿದ್ಧರಾಮಯ್ಯ ಕರ್ನಾಟಕದ ಪೋಪ್ ಆಗಲು ಹೊರಟಿದ್ದಾರೆ. ಆಗ ಟಿಪ್ಪು ಪೋಷಾಕು, ಈಗ ಪಾದ್ರಿ ರೂಪದ ಆಡಳಿತ ನಡೆಸುತ್ತಿದ್ದಾರೆ. ಸರಕಾರ ಮುಲ್ಲಾ, ಪಾದ್ರಿಗಳ ಕೈಗೊಂಬೆಯಾಗಲು ಹೊರಟಿದೆ. ಸಿಎಂ ಫಾದರ್ ಸಿದ್ರಾಮಯ್ಯ ಆಗಲು ಹೊರಟಿದ್ದಾರೆ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಹಿಂದೆ ಯಾರದೋ ಓಲೈಕೆ ಅಡಗಿದೆ, ರಾಜ್ಯದ ಹಿತ ಅಡಗಿಲ್ಲ. ಸಾಮಾಜಿಕ ನ್ಯಾಯದ ಆಶಯವನ್ನು ಶಿಲುಬೆಗೆ ಏರಿಸಬೇಡಿ ಎಂದು ಎಚ್ಚರಿಸಿದ ಸುನಿಲ್ ಕುಮಾರ್, ದಲಿತ ಒಬಿಸಿಯನ್ನು ಮತಾಂತರಕ್ಕೆ ಕೈಹಾಕಿರುವುದು ದುರಂತ. ಸಿದ್ದರಾಮಯ್ಯ ಕುಲಶಾಸ್ತ್ರದ ಅಧ್ಯಯನ ಮಾಡಬೇಕು. ಅವರು ಸಂವಿಧಾನವನ್ನು ಹೇಗೆ ಅರ್ಥ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಸಮಾಜ ಒಡೆದು ಕರ್ನಾಟಕದ ಪೋಪ್ ಆಗಲು ಹೊರಟಿದ್ದಾರೆಯೇ ಎಂಬ ಸಂದೇಹ ಕಾಡುತ್ತಿದೆ. ಕ್ರಿಶ್ಚಿಯನ್ ಉಪಜಾತಿ ಕೈಬಿಡದಿದ್ದಲ್ಲಿ ಪ್ರತೀ ತಾಲೂಕುಗಳಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಿದೆ. ಹಿಂದುಳಿದ ವರ್ಗಗಳ ಆಯೋಗಕ್ಕೆ ಜನ ಮುತ್ತಿಗೆ ಹಾಕುವ ಮುನ್ನ ಸಾರ್ವಜನಿಕ ವಿರೋಧದ ನಡುವೆ ಸೆ.22ರಿಂದ ಉದ್ದೇಶಿಸಿರುವ ಸಮೀಕ್ಷೆ 15 ದಿನಗಳ ಮಟ್ಟಿಗೆ ಮುಂದೂಡಬೇಕು. ಈ ಬಗ್ಗೆ ಪರಾಮರ್ಶೆ ನಡೆಸಬೇಕು ಎಂದರು.
ಆರ್ಥಿಕ ಶೈಕ್ಷಣಿಕ ಸಮೀಕ್ಷೆ ಎಲ್ಲದಕ್ಕೂ ಅಡಿಪಾಯ. ಆದರೆ, ಆ ಬಗ್ಗೆ ಸರ್ಕಾರವೇ ಗೊಂದಲದಲ್ಲಿದೆ. ಸಚಿವ ಸಂಪುಟದಲ್ಲಿ ಈ ವಿಚಾರದಲ್ಲಿ ಸಿಎಂ ಏಕಾಂಗಿಯಾಗಿದ್ದಾರೆ. ರಾಜ್ಯ ಸರಕಾರದ ಒತ್ತಡಕ್ಕೆ ಮಣಿದು ಆಯೋಗ ಯಾವುದೇ ಪೂರ್ವಸಿದ್ಧತೆ ಇಲ್ಲದೆ ಗಣತಿಗೆ ಹೊರಟಿದೆ. ದಿನಗಳ 15 ಗಡುವಿನಲ್ಲಿ ಗಣತಿ ನಡೆಯಲಿದೆ. ಸರಕಾರ ಜಾತಿ ಗಣತಿಯನ್ನು ಮುಂದೂಡಬೇಕು, ಮರುಚಿಂತನೆ ಮಾಡಬೇಕು. ಈ ಬಗ್ಗೆ ಎಲ್ಲರ ಅಭಿಪ್ರಾಯ ಪಡೆಯಬೇಕು. ಈ ಗೊಂದಲದ ನಡುವೆ ಒಳ್ಳೆಯ ವರದಿ ಕೈಸೇರಲು ಸಾಧ್ಯವಿಲ್ಲ ಎಂದು ಸುನಿಲ್ ಹೇಳಿದರು.
ಒಡೆದ ಕಾಂಗ್ರೆಸ್
ಸಚಿವ ಸಂಪುಟ ಒಡೆದು ಹೋಗಿದೆ. ಕಾಂಗ್ರೆಸ್‌ನಲ್ಲಿ ಜಾರಕಿಹೊಳಿ, ಡಿಕೆಶಿ, ಪರಮೇಶ್ವರ್, ಸಿದ್ದರಾಮಯ್ಯ ಸುರ್ಜೇವಾಲ ಪಂಗಡವಾಗಿದೆ ಎಂದು ಸುನಿಲ್ ಕುಮಾರ್ ಹೇಳಿದರು.
ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ವಿಚಾರದಲ್ಲಿ ಬಿಜೆಪಿ ನಿಲುವು ಸ್ಪಷ್ಟವಾಗಿದೆ. ಹಿಂದೂ ಎಂದೇ ಬರೆಸುವಂತೆ ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷರು ಹೇಳಿದ್ದಾರೆ ಎಂದು ಸುನಿಲ್ ಕುಮಾರ್ ಹೇಳಿದರು.