
Uchchila Dasara: ಸೆ.22-ಅ.2: ವೈಭವದ ಉಡುಪಿ ಉಚ್ಚಿಲ ದಸರಾ
Wednesday, September 17, 2025
ಲೋಕಬಂಧು ನ್ಯೂಸ್, ಪಡುಬಿದ್ರಿ
ಮೊಗವೀರ ಮಹಾಜನ ಸಂಘ ಆಡಳಿತಕ್ಕೆ ಒಳಪಟ್ಟಿರುವ ಕರ್ನಾಟಕದ ಕೊಲ್ಹಾಪುರ ಖ್ಯಾತಿಯ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಚತುರ್ಥ ವರ್ಷದ ಉಡುಪಿ ಉಚ್ಚಿಲ ದಸರಾ ಮಹೋತ್ಸವ ಸೆ. 22ರಿಂದ ಅ.2ರ ವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಭಕ್ತಾದಿಗಳ ನೆರವಿನೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಶಾಲಿನಿ ಡಾ.ಜಿ.ಶಂಕರ್ ಸಭಾಂಗಣದಲ್ಲಿ ನಡೆಯಲಿದೆ ಎಂದು ದಸರಾ ಮಹೋತ್ಸವ ರೂವಾರಿ ನಾಡೋಜ ಡಾ.ಜಿ.ಶಂಕರ್ ತಿಳಿಸಿದರು.
11 ದಿನಗಳ ಆಚರಣೆ
ಬುಧವಾರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಶ್ರೀ ಶಾರದಾಮಾತೆ ಹಾಗೂ ನವದುರ್ಗೆಯರ ವಿಗ್ರಹಗಳನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಿ ಹನ್ನೊಂದು ದಿನಗಳ ಕಾಲ ಪೂಜೆ, ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಅನ್ನ ಸಂತರ್ಪಣೆಯೊಂದಿಗೆ ನಡೆಯಲಿದೆ.
ಸ್ವಯಂಸೇವಕರು ಹಾಗೂ ದಾನಿಗಳ ಸಹಕಾರದಿಂದ ಉಡುಪಿ ಉಚ್ಚಿಲ ದಸರಾ ಧಾರ್ಮಿಕ ಸಾಂಸ್ಕೃತಿಕ ಸಮಗ್ರತೆಯ ಹಬ್ಬವಾಗಿ ಜಾಗತಿಕ ಖ್ಯಾತಿ ಪಡೆದಿದೆ ಎಂದರು.
ದೀಪಾಲಂಕಾರ
ದಸರಾ ಪ್ರಯುಕ್ತ ಪಡುಬಿದ್ರಿಯಿಂದ ಕಾಪು ಕಡಲ ತೀರದ ವರೆಗೆ ವಿದ್ಯುದೀಪಾಲಂಕಾರ ಮಾಡಲಾಗುತ್ತಿದ್ದು, ಸೆ.21ರಂದು ಸಂಜೆ 6.30ಕ್ಕೆ ಉದ್ಘಾಟನೆಗೊಳ್ಳಲಿದೆ.
ವಿಗ್ರಹ ಪ್ರತಿಷ್ಠಾಪನೆ
ಸೆ. 22ರಂದು ಬೆಳಿಗ್ಗೆ 9 ಗಂಟೆಗೆ ತಂತ್ರಿ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಹಾಗೂ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ನೇತೃತ್ವದಲ್ಲಿ ಶ್ರೀ ಶಾರದಾದೇವಿ ಹಾಗೂ ನವದುರ್ಗೆಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುವುದು ಎಂದರು. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದಸರಾ ಮಹೋತ್ಸವಕ್ಕೆ ಚಾಲನೆ ನೀಡುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ವಸ್ತುಪ್ರದರ್ಶನ ಉದ್ಘಾಟಿಸುವರು. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮತ್ತು ಎಸ್.ಪಿ. ಹರಿರಾಮ್ ಶಂಕರ್ ಅಭ್ಯಾಗತರಾಗಿ ಆಗಮಿಸುವರು.
ಪ್ರಮುಖ ಕಾರ್ಯಕ್ರಮಗಳು
ಸೆ.22ರಿಂದ ಅ.2ರ ವರೆಗೆ ಪ್ರತಿದಿನ ಚಂಡಿಕಾಹೋಮ, ಕುಂಕುಮಾರ್ಚನೆ, ಭಜನೆ, ಧಾರ್ಮಿಕ ಸಭೆ, ಕಲ್ಪೋಕ್ತ ಪೂಜೆ ನಡೆಯಲಿದ್ದು ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆಗೆ ವ್ಯವಸ್ಥೆ ಮಾಡಲಾಗಿದೆ. ಅ. 2ರಂದು ವಿಜಯ ದಶಮಿಯಂದು ಸಾಮೂಹಿಕ ಮಹಾಚಂಡಿಕಾ ಯಾಗ, ಮಹಾಅನ್ನಸಂತರ್ಪಣೆ, ಶೋಭಾಯಾತ್ರೆ, ಕಾಪು ದೀಪಸ್ತಂಭ ಬಳಿ ಸಮುದ್ರತೀರದಲ್ಲಿ ಗಂಗಾರತಿ, ಡ್ರೋನ್ ಮೂಲಕ ಪುಷ್ಪಾರ್ಚನೆ ಹಾಗೂ ಸುಡುಮದ್ದು ಪ್ರದರ್ಶನ ಇರಲಿದೆ.
100ಕ್ಕೂ ಅಧಿಕ ಸಾಂಸ್ಕೃತಿಕ ವೈವಿಧ್ಯ
11 ದಿನಗಳ ಉತ್ಸವದಲ್ಲಿ ಭಕ್ತಿ ಗೀತಾಂಜಲಿ, ಸಂಗೀತ, ನೃತ್ಯ ವೈವಿಧ್ಯ, ಯಕ್ಷಗಾನ, ನಾಟಕ, ಜನಪದ ಕಾರ್ಯಕ್ರಮಗಳು, ದಾಂಡಿಯಾ, ಕುಣಿತ ಭಜನೆ, ರಾಜ್ಯ ಮಟ್ಟದ ಸ್ಪರ್ಧೆಗಳು ಸೇರಿದಂತೆ 100ಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಯುವ ದಸರಾ, ಗುರುಕಿರಣ್ ನೈಟ್ಸ್, ಜೋಡಾಟ, ಶಿವಪ್ರಣಾಮ್, ನಾದವೈಕುಂಠ ಸೇರಿದಂತೆ ವಿವಿಧ ಮನೋರಂಜನಾ ಕಾರ್ಯಕ್ರಮಗಳು ರಂಜಿಸಲಿವೆ.
ಸೀರೆ ಮೇಳ, ವಸ್ತುಪ್ರದರ್ಶನ
ದಸರಾ ಮಹೋತ್ಸವದ ವಿಶೇಷ ಆಕರ್ಷಣೆಯಾಗಿ ಕಾಂಜೀವರಂ ಸೀರೆ ಮೇಳ ನಡೆಯಲಿದ್ದು ಫಲಪುಷ್ಪ ಪ್ರದರ್ಶನ, ಗುಡಿ ಕೈಗಾರಿಕೆ ಪ್ರಾತ್ಯಕ್ಷಿಕೆ, ಸಮುದ್ರದ ಜೀವಂತ ಮೀನು ಹಾಗೂ ಹೊಳೆ ಮೀನುಗಳ ಪ್ರದರ್ಶನ, ಮರಳು ಕಲಾಕೃತಿ, ಕುಬ್ಬ ಸಹೋದರರ ಕಲಾಕೃತಿ, ಜನಜಾಗೃತಿ ಕಲಾಕೃತಿ, ವಿಶೇಷ ಶಾಲೆಯ ಮಕ್ಕಳ ಕಲಾಕೃತಿ, ಪುಸ್ತಕ ಮಳಿಗೆ ಸೇರಿದಂತೆ ವಿವಿಧ ಮಳಿಗೆಗಳು ವಸ್ತುಪ್ರದರ್ಶನದಲ್ಲಿರಲಿವೆ.
ವಿವಿಧ ಸ್ಪರ್ಧೆಗಳು
ಸೆ.25ರಂದು ಮಧ್ಯಾಹ್ನ ರಂಗೋಲಿ ಸ್ಪರ್ಧೆ, 26ರಂದು ಬೆಳಿಗ್ಗೆ ಮಕ್ಕಳಿಗಾಗಿ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ, 27ರಂದು ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಬೆಳಿಗ್ಗೆ ಚಿತ್ರಕಲಾ ಸ್ಪರ್ಧೆ, ಮಧ್ಯಾಹ್ನ ಮಹಿಳೆಯರ ಹುಲಿಕುಣಿತ ಹಾಗೂ ರಾತ್ರಿ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆ, 28ರಂದು ಬೆಳಿಗ್ಗೆ ಅವಿಭಜಿತ ದ.ಕ. ಜಿಲ್ಲಾ ಮಟ್ಟದ ಕುಸ್ತಿ ಸ್ಪರ್ಧೆ, ರಾತ್ರಿ ರಾಜ್ಯ ಮಟ್ಟದ ಆಹ್ವಾನಿತ ತಂಡಗಳ ನೃತ್ಯ ಸ್ಪರ್ಧೆ ನಡೆಯಲಿದೆ.
ಅ.2ರಂದು ಶೋಭಾಯಾತ್ರೆ
ಅ. 2ರಂದು ಮಧ್ಯಾಹ್ನ 2.30ಕ್ಕೆ ವಿಸರ್ಜನಾ ಪೂಜೆ ನಡೆದು, ಅಪರಾಹ್ನ 3ರಿಂದ ಶೋಭಾಯಾತ್ರೆ ಆರಂಭಗೊಳ್ಳಲಿದೆ. ಶಾರದಾಮಾತೆ ಹಾಗೂ ನವದುರ್ಗೆಯರ ವಿಗ್ರಹಗಳ ಶೋಭಾಯಾತ್ರೆ ಅಪರಾಹ್ನ 4.30ಕ್ಕೆ ಶ್ರೀಕ್ಷೇತ್ರದಿಂದ ಹೊರಟು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎರ್ಮಾಳ್ ತನಕ ಸಾಗಿ ಅಲ್ಲಿಂದ ತಿರುಗಿ ರಾಷ್ಟ್ರೀಯ ಹೆದ್ದಾರಿ ಮೂಲಕ ಉಚ್ಚಿಲ- ಮೂಳೂರು ಕೊಪ್ಪಲಂಗಡಿ ವರೆಗೆ ಸಾಗಿ ಅಲ್ಲಿಂದ ಕಾಪು ಸಮುದ್ರ ತೀರದ ದೀಪಸ್ತಂಭ ಬಳಿ ಜಲಸ್ತಂಭನ ಮಾಡಲಾಗುವುದು.
ಗಂಗಾರತಿ
ಕಾಪು ಬೀಚ್'ನಲ್ಲಿ ರಸಮಂಜರಿ, ಆಕರ್ಷಕ ಸುಡುಮದ್ದು ಪ್ರದರ್ಶನ ಹಾಗೂ ಡ್ರೋನ್ ಮೂಲಕ ಪುಷ್ಪಾರ್ಚನೆ, ಸಹಸ್ರಾರು ಸುಮಂಗಲೆಯರಿಂದ ಸಾಮೂಹಿಕ ಮಂಗಳಾರತಿ, ಕಾಶಿಯಿಂದ ಆಗಮಿಸುವ ಅರ್ಚಕರಿಂದ ಕಾಶಿ ಗಂಗಾ ನದಿಯ ತೀರ ಮಾದರಿಯಲ್ಲಿ ನವದುರ್ಗೆಯರು, ಶ್ರೀ ಶಾರದಾಮಾತೆ ಹಾಗೂ ಸಮುದ್ರರಾಜನಿಗೆ ಗಂಗಾರತಿ ನಡೆಯಲಿದೆ. ರಾತ್ರಿ 7.30ರಿಂದ ಕಾಪು ದೀಪಸ್ತಂಭದ ಬಳಿ ಲೈವ್ ಆರ್ಕೆಸ್ಟ್ರಾ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಡಾ.ಜಿ.ಶಂಕರ್ ವಿವರಿಸಿದರು.
ಲಕ್ಷಾಂತರ ಮಂದಿಯ ನಿರೀಕ್ಷೆ
11 ದಿನಗಳ ಕಾಲ ನಡೆಯುವ ಉತ್ಸವದಲ್ಲಿ 10 ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆಯಿದ್ದು 4-5 ಲಕ್ಷ ಜನರಿಗೆ ಊಟೋಪಚಾರ, 3 ಲಕ್ಷ ಮಂದಿಗೆ ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಲಾಗುವುದು. ಮಂಗಳೂರು ಕಡೆಯಿಂದ ಬರುವ ವಾಹನಗಳಿಗೆ ಸರಸ್ವತಿ ಶಾಲಾ ಮೈದಾನದಲ್ಲಿ ಮತ್ತು ಉಡುಪಿ ಕಡೆಯಿಂದ ಬರುವ ವಾಹನಗಳಿಗೆ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯ ಪಕ್ಕದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಲಿಸಲಾಗುವುದು.
ಪ್ರತಿದಿನ 1,500 ಸ್ವಯಂಸೇವಕರು ಅನ್ನ ಸಂತರ್ಪಣೆ ಮತ್ತು ಭಕ್ತರ ವ್ಯವಸ್ಥೆಯಲ್ಲಿ ತೊಡಗಿಕೊಳ್ಳಲಿದ್ದಾರೆ. ಉಪ್ಪಳದಿಂದ ಶೀರೂರು ವರೆಗಿನ ಮೊಗವೀರ ಸಮಾಜದ ಬಂಧುಗಳು ಮಾತ್ರವಲ್ಲದೆ, ವಿವಿಧ ಮಹಿಳಾ ತಂಡಗಳು, ಸೌಟ್ಸ್ ಹಾಗೂ ಗೈಡ್ಸ್ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಭಾಗವಹಿಸಲಿದ್ದಾರೆ ಎಂದು ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ತಿಳಿಸಿದರು.
ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ, ದಸರಾ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ, ಮಹಾಜನ ಸಂಘದ ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಪ್ರಮುಖರಾದ ಸತೀಶ್ ಕುಂದರ್, ಉಷಾರಾಣಿ ಬೋಳೂರು, ಸಂಧ್ಯಾದೀಪ ಸುನೀಲ್, ರತ್ನಾಕರ ಸಾಲ್ಯಾನ್, ಸುಜಿತ್ ಸಾಲ್ಯಾನ್, ಸತೀಶ್ ಅಮೀನ್ ಬಾರ್ಕೂರು, ಶಿವಕುಮಾರ್ ಮೆಂಡನ್, ಮನೋಜ್ ಕಾಂಚನ್, ಸುಗುಣ ಕರ್ಕೇರ, ಶಂಕರ್ ಸಾಲ್ಯಾನ್, ದೇವಳದ ವ್ಯವಸ್ಥಾಪಕ ಸತೀಶ ಅಮೀನ್ ಪಡುಕರೆ ಮೊದಲಾದವರಿದ್ದರು.