.jpg)
Udupi: ಕೃಷ್ಣನ ನಾಡಿನಲ್ಲಿ ಸಂಭ್ರಮದ ಜನ್ಮಾಷ್ಟಮಿ
Sunday, September 14, 2025
ಲೋಕಬಂಧು ನ್ಯೂಸ್, ಉಡುಪಿ
ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ನೇತೃತ್ವದಲ್ಲಿ ಭಾನುವಾರ ಇಲ್ಲಿನ ಶ್ರೀಕೃಷ್ಣ ಮಠದಲ್ಲಿ ಸೌರಮಾನ ಪದ್ಧತಿಯಂತೆ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮದಿಂದ ನಡೆಯಿತು.ಉಡುಪಿಗೆ ಉಡುಪಿಯೇ ಹಬ್ಬದ ಸಡಗರದಲ್ಲಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹಾಗೂ ಪ್ರವಾಸಿಗರು ಉಡುಪಿಗೆ ಆಗಮಿಸಿದ್ದಾರೆ. ರಥಬೀದಿಯಲ್ಲಿ ವಿವಿಧ ಸರಕುಗಳು, ಆಟಿಕೆಗಳು, ತಿನಿಸುಗಳು ಇತ್ಯಾದಿಗಳ ಸಂತೆ ಜಮಾಯಿಸಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗು ಪೊಲೀಸ್ ಪಹರೆ ನಿಯೋಜಿಸಲಾಗಿದೆ.
ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದ ಉತ್ತರಾರ್ಧದಲ್ಲಿ ನಡೆಯುತ್ತಿರುವ ಜನ್ಮಾಷ್ಟಮಿಯನ್ನು 48 ದಿನಗಳ ಪರ್ಯಂತ ಕೃಷ್ಣ ಮಂಡಲೋತ್ಸವವಾಗಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಹಮ್ಮಿಕೊಳ್ಳಲಾಗಿತ್ತು. ಸೆ.15ರಂದು ಸೋಮವಾರ ಕೃಷ್ಣಲೀಲೋತ್ಸವದ ಪ್ರತೀಕವಾಗಿ ವಿಟ್ಲಪಿಂಡಿ ಮಹೋತ್ಸವ ನಡೆಯಲಿದೆ.
ಪುಷ್ಪಾಲಂಕಾರ
ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಠವನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಬಣ್ಣ ಬಣ್ಣದ ವಿದ್ಯುದ್ದೀಪಗಳಿಂದ ಸಿಂಗರಿಸಲಾಗಿದೆ.
ಭಕ್ತರು ಸರದಿಯ ಸಾಲಿನಲ್ಲಿ ಆಗಮಿಸಿ ಕೃಷ್ಣ ದರ್ಶನ ಪಡೆದರು. ಭಜನೆ, ಸಂಕೀರ್ತನೆ, ಸ್ತೋತ್ರ ಪಠಣ ಇತ್ಯಾದಿ ನಡೆಯಿತು.