Udupi: ಸಣ್ಣ ಜಾತಿಗಳನ್ನು ಒಡೆಯಹೊರಟಿರುವ ಸರ್ಕಾರ
Thursday, September 18, 2025
ಲೋಕಬಂಧು ನ್ಯೂಸ್, ಉಡುಪಿ
ಮತಾಂತರಕ್ಕೆ ಬೆಂಬಲ ನೀಡುತ್ತಿರುವ ಸರ್ಕಾರ ಸಣ್ಣ ಜಾತಿಗಳನ್ನು ಒಡೆಯಹೊರಟಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದರು.ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂತರಾಜ್ ವರದಿಯನ್ನು ಈ ಸರ್ಕಾರ ತಿರಸ್ಕರಿಸಲೂ ಇಲ್ಲ, ಅಂಗೀಕರಿಸಿಯೂ ಇಲ್ಲ. ಅದಕ್ಕಾಗಿ 165 ಕೋಟಿ ರೂ. ಖರ್ಚಾಗಿದೆ. ಈಗ ಮತ್ತೊಮ್ಮೆ ಹೊಸ ವರದಿಗೆ ಸಿದ್ದರಾಮಯ್ಯ ಸರ್ಕಾರ ಹೊರಟಿದೆ.
42ರಿಂದ 50 ಜಾತಿಗಳ ಜೊತೆ ಕ್ರಿಶ್ಚಿಯನ್ ಎಂಬ ಪದ ಸೇರಿಸಿದ್ದಾರೆ. ಅದರ ಬಗ್ಗೆ ನಮ್ಮ ಸ್ಪಷ್ಟ ವಿರೋಧ ಇದೆ. ಲಿಂಗಾಯಿತ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ಈಡಿಗ ಕ್ರಿಶ್ಚಿಯನ್, ಮಡಿವಾಳ ಕ್ರಿಶ್ಚಿಯನ್ ಹೀಗೆ ಜಾತಿಯ ಜೊತೆ ಕ್ರಿಶ್ಚಿಯನ್ ಎಂಬ ಪದ ಬಳಕೆ ಮಾಡಿದ್ದಾರೆ. ಅದರಿಂದ ಮತಾಂತರಗೊಳ್ಳಲು ಸರಕಾರರ ಸಂಪೂರ್ಣ ಬೆಂಬಲ ನೀಡುವಂತೆ ತೋರುತ್ತಿದೆ ಎಂದರು.
ಸರಕಾರ ಹಿಂದೂ ಧರ್ಮದ ಸಣ್ಣ ಜಾತಿಗಳನ್ನು ಒಡೆಯಲು ಹೊರಟಿದೆ. ಈ ಕುರಿತ ಗೊಂದಲ ನಿವಾರಿಸಿ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಆಗ್ರಹಿಸಿರುವ ಸಂಸದ ಕೋಟ, ಸಾಮಾಜಿಕ ಶೈಕ್ಷಣಿಕ ಜನಗಣತಿ ಎಂದರೆ ಜಾತಿಯ ಜೊತೆ ಕ್ರಿಶ್ಚಿಯನ್ ಸೇರಿಸುವುದೇ? ಸರಕಾರವೇ ನೇರ ನಿಂತು ಹಿಂದೂ ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದೆ. ಜಾತಿ ಸೂಚಕದ ಮುಂದೆ ಕ್ರಿಶ್ಚಿಯನ್ ಎಂಬ ಪದ ವಾಪಾಸ್ ಪಡೆಯಿರಿ ಎಂದು ಒತ್ತಾಯಿಸಿದರು.