
Udupi: ಆಯಾಸ ನೀಗಿಸುವುದೂ ಕೃಷ್ಣನ ಸೇವೆ
Tuesday, September 16, 2025
ಲೋಕಬಂಧು ನ್ಯೂಸ್, ಉಡುಪಿ
ಶ್ರೀಕೃಷ್ಣ ಜನ್ಮಾಷ್ಟಮಿಯ ವಿಟ್ಲಪಿಂಡಿ ಮಹೋತ್ಸವ ಹಾಗೂ ದೇವರ ದರ್ಶನಕ್ಕೆ ಬರುವ ಭಕ್ತರು ಹಾಗೂ ಯಾತ್ರಾರ್ಥಿಗಳ ಆಯಾಸ ನೀಗಿಸುವುದೂ ಶ್ರೀಕೃಷ್ಣನ ಸೇವೆಯೇ ಆಗಿದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.
ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಂದ ಪೇಜಾವರ ಮಠದ ಮುಂಭಾಗದಲ್ಲಿ ಉಚಿತ ಮಜ್ಜಿಗೆ ವಿತರಣೆಗೆ ಚಾಲನೆ ನೀಡಿದರು.
ಕಳೆದ ಒಂದು ವಾರದಿಂದ ಮಳೆ ಇಲ್ಲದ್ದರಿಂದ ವಿಟ್ಲಪಿಂಡಿ ಲೀಲೋತ್ಸವದಂದು ಭಾರಿ ಬಿಸಿಲಿದೆ. ರಥಬೀದಿಗೆ ಬಂದಿರುವ ಭಕ್ತರಿಗೆ ಮಜ್ಜಿಗೆ ಆಯಾಸ ನೀಗಿಸಲಿ ಎಂದು ಸುಗುಣೇಂದ್ರ ಶ್ರೀಪಾದರು ಹಾರೈಸಿದರು.
ಕಿರಿಯ ಶ್ರೀ ಸುಶೀಂದ್ರತೀರ್ಥ ಶ್ರೀಪಾದರು ಜೊತೆಗಿದ್ದರು.
ಪುತ್ತಿಗೆ ಮಠದ ದಿವಾನ ನಾಗರಾಜ ಅಚಾರ್ಯ, ಪರಿಷತ್ ಅಧ್ಯಕ್ಷ ಚಂದ್ರಕಾಂತ ಕೆ.ಎನ್., ಪ್ರಧಾನ ಕಾರ್ಯದರ್ಶಿ ರಾಜೇಶ ಫಣಿಯಾಡಿ, ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ ಮೊದಲಾದವರಿದ್ದರು.
ಕನಕದಾಸ ಟ್ರಸ್ಟ್ ವತಿಯಿಂದ ಮಜ್ಜಿಗೆ
ಉಡುಪಿಯ ಕನಕ ಗೋಪುರದ ಮುಂದಿರುವ ಕನಕದಾಸರ ಮಂಟಪದಲ್ಲಿ ಉಡುಪಿ ಜಿಲ್ಲಾ ಭಕ್ತ ಶ್ರೀ ಕನಕದಾಸ ಸೇವಾ ಟ್ರಸ್ಟ್ ವತಿಯಿಂದ ಭಕ್ತರಿಗೆ ಉಚಿತವಾಗಿ ಮಜ್ಜಿಗೆ ವಿತರಿಸಲಾಯಿತು.
ಟ್ರಸ್ಟ್ ಅಧ್ಯಕ್ಷ ಹನುಮಂತ ಡೊಳ್ಳಿನ ಮಾತನಾಡಿ, ಇದು 11ನೇ ವರ್ಷದ ಸೇವೆಯಾಗಿದೆ. ಮಜ್ಜಿಗೆ ಕುಡಿಯಲು ಬಂದ ಜನರ ಆಯಾಸ ನೀಗಿಸುವ ಜೊತೆಗೆ ಭಗವದ್ಗೀತೆ ಪಠಣ ಅಥವಾ ಬರೆಯುವಂತೆ ಜಾಗೃತಿಯನ್ನೂ ಮೂಡಿಸುತ್ತೇವೆ.
ಭಕ್ತ ಕನಕನ ಭಕ್ತಿಗೆ ಶ್ರೀಕೃಷ್ಣ ಒಲಿದಿದ್ದಾನೆ. ಎಲ್ಲರಿಗೂ ಶ್ರೀಕೃಷ್ಣನ ಅನುಗ್ರಹ ಲಭಿಸಲಿ ಎಂದು ಹಾರೈಸಿದರು.
ಟ್ರಸ್ಟ್ ನಿರ್ದೇಶಕ ಬಸವರಾಜ ಕುರುಬರ, ಕಾರ್ಯದರ್ಶಿ ದ್ಯಾವಣ್ಣ ಎಸ್. ಪೂಜಾರ್, ಕಾರ್ಯಾಧ್ಯಕ್ಷ ಹನುಮಂತ ಆಡಿನ ಮೊದಲಾದವರಿದ್ದರು.