Udupi: ರಂಗಭೂಮಿ ಸದಸ್ಯ ಕೆ.ಗೋಪಾಲ ನಿಧನ
Friday, September 19, 2025
ಲೋಕಬಂಧು ನ್ಯೂಸ್, ಉಡುಪಿ
ರಂಗಭೂಮಿ ಉಡುಪಿ ಸಕ್ರಿಯ ಸದಸ್ಯ ಎಲ್ಐಸಿ ನಿವೃತ್ತ ಉದ್ಯೋಗಿ ಕೆ.ಗೋಪಾಲ ವಯೋಸಹಜ ಅಸೌಖ್ಯದಿಂದ ಸೆ.18ರಂದು ಗುರುವಾರ ಸ್ವಗೃಹದಲ್ಲಿ ನಿಧನರಾದರು.ಮೂಲತಃ ಕೇರಳದವರಾದ ಅವರು 1990ರ ಸುಮಾರಿಗೆ ರಂಗಭೂಮಿ ಸಂಸ್ಥೆಯ ಸದಸ್ಯರಾಗಿ 1995ರಿಂದ 2010ರ ತನಕ ಆಡಳಿತ ಮಂಡಳಿ ಸದಸ್ಯರಾಗಿ, ಪ್ರಸ್ತುತ ಆಡಳಿತ ಮಂಡಳಿ ಗೌರವ ಸಲಹಾ ಸಮಿತಿ ಸದಸ್ಯರಾಗಿ ನಿರಂತರವಾಗಿ ರಂಗಭೂಮಿಯನ್ನು ಬೆಳೆಸುವಲ್ಲಿ ನಿಃಸ್ವಾರ್ಥವಾಗಿ ಸೇವೆ ಸಲ್ಲಿಸಿದ್ದ ಅವರು ಆಪ್ತೇಷ್ಟರಿಂದ 'ಗೋಪಾಲಣ್ಣ' ಎಂದೇ ಕರೆಯಲ್ಪಡುತ್ತಿದ್ದರು.
ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಉದ್ಯೋಗಿಯಾಗಿದ್ದ ಅವರು ಉಡುಪಿಯ ರಂಗಭೂಮಿ ಅಲ್ಲದೆ ತುಳುಕೂಟ, ಯಕ್ಷಗಾನ ಕಲಾರಂಗ ಇನ್ನಿತರ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.
ಕಾಂಗ್ರೆಸ್ ಪಕ್ಷದಲ್ಲೂ ಗುರುತಿಸಿಕೊಂಡಿದ್ದರು.
ರಂಗಭೂಮಿ ಸಂಸ್ಥೆಯ ಯಾವುದೇ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಎಲ್ಲಾ ಸದಸ್ಯರಿಗೆ ಮುಖತಃ ತಲುಪಿಸುವಲ್ಲಿ ಅವರ ಸೇವೆ ಅನನ್ಯ. ಅಲ್ಲದೆ, ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಸಭಾಂಗಣ ಸಿದ್ದತೆ ಹಾಗೂ ವೇದಿಕೆ ತಯಾರಿಯಲ್ಲಿ ಮುಂಚೂಣಿಯಲ್ಲಿರುತ್ತಿದ್ದರು.
ಮೃತರು ಓರ್ವ ಮಗ ಹಾಗೂ ಮಗಳನ್ನು ಅಗಲಿದ್ದಾರೆ.