
Udupi: ವಿಪ್ರ ಸಾಧಕರಿಗೆ ಗೌರವಾರ್ಪಣೆ
Sunday, September 14, 2025
ಲೋಕಬಂಧು ನ್ಯೂಸ್, ಉಡುಪಿ
ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ತಿಂಗಳ ಕಾರ್ಯಕ್ರಮದ ಅಂಗವಾಗಿ 'ಜೈ ಜವಾನ್ ಜೈ ಕಿಸಾನ್' ಘೋಷವಾಕ್ಯದಡಿ ದೇಶಕ್ಕಾಗಿ ಹೋರಾಡಿದ ಭಾರತೀಯ ಭೂಸೇನೆಯ ನಿವೃತ್ತ ಯೋಧ ಕರ್ನಲ್ ಪ್ರಕಾಶ್ಚಂದ್ರ ಹಾಗೂ ಇಂಜಿನಿಯರ್ ಮತ್ತು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಜೇಶ್ ಕುಮಾರ್ ಪುತ್ತೂರು ಅವರನ್ನು ಅಭಿನಂದಿಸಲಾಯಿತು.
ಸನ್ಮಾನ ಸ್ವೀಕರಿಸಿದ ನಿವೃತ್ತ ಸೇನಾನಿ ಕರ್ನಲ್ ಪ್ರಕಾಶ್ಚಂದ್ರ ಮಾತನಾಡಿ, ಪ್ರಸ್ತುತ ಭಾರತೀಯ ಸೇನೆ ಸೇರಿಕೊಳ್ಳುವ ಯುವಜನತೆಯ ಸಂಖ್ಯೆ ಬಹಳ ಕಡಿಮೆ ಇದೆ. ಸೇನೆ ಸೇರಿಕೊಳ್ಳುವುದು ಕೇವಲ ಯುದ್ಧ ಮಾಡುವುದಕ್ಕಷ್ಟೇ ಸೀಮಿತವಲ್ಲ. ಅಲ್ಲಿ ವಿವಿಧ ರೀತಿಯ ಹುದ್ದೆ ಮತ್ತು ಜವಾಬ್ದಾರಿಗಳಿವೆ. ದೇಶಕ್ಕಾಗಿ ಹೋರಾಡುವ ಅವಕಾಶ ಎಲ್ಲರಿಗೂ ಸಿಗದು. ಹಾಗಾಗಿ ನಮ್ಮ ಯುವಶಕ್ತಿ ಸೇನೆಯ ವಿವಿಧ ಹುದ್ದೆಗಳನ್ನು ಸವಾಲಾಗಿ ಸ್ವೀಕರಿಸಿ ದೇಶ ಸೇವೆ ಮಾಡಲು ದೀಕ್ಷಾಬದ್ಧರಾಗಬೇಕು ಎಂದು ಕರೆ ನೀಡಿದರು.
ಇನ್ನೋರ್ವ ವಿಪ್ರಸಾಧಕ ಪ್ರಗತಿಪರ ಕೃಷಿಕ ರಾಜೇಶ್ ಕುಮಾರ್, ಕೃಷಿ ನಮ್ಮ ದೇಶದ ಜೀವನಾಡಿ. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಕೃಷಿಯನ್ನು ಪ್ರೀತಿಸಿದರೆ ದೇವರನ್ನು ಪ್ರೀತಿಸಿದಂತೆ ಎಂದರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ.ರಘುಪತಿ ಭಟ್, ರೋಬೋಸಾಫ್ಟ್'ನ ಹಣಕಾಸು ವಿಭಾಗದ ಉಪಾಧ್ಯಕ್ಷ ಕೃಷ್ಣರಾಜ ರಾವ್, ಯುವ ಬ್ರಾಹ್ಮಣ ಪರಿಷತ್ ನಿಕಟಪೂರ್ವ ಅಧ್ಯಕ್ಷ ಚೈತನ್ಯ ಎಂ.ಜಿ., ಮಾಜಿ ಅಧ್ಯಕ್ಷ ವಿಷ್ಣುಪ್ರಸಾದ್ ಪಾಡಿಗಾರು ಆಗಮಿಸಿದ್ದರು.
ಪರಿಷತ್ ಅಧ್ಯಕ್ಷ ಚಂದ್ರಕಾಂತ್ ಕೆ.ಎನ್. ಸ್ವಾಗತಿಸಿದರು. ಪದ್ಮಲತಾ ವಿಷ್ಣು ಮತ್ತು ಅಮಿತಾ ಕ್ರಮಧಾರಿ ಸನ್ಮಾನ ಪತ್ರ ವಾಚಿಸಿದರು. ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ, ಸುನೀತಾ ಚೈತನ್ಯ, ರಾಧಿಕಾ ಚಂದ್ರಕಾಂತ್, ಜ್ಯೋತಿಲಕ್ಷ್ಮಿ ಸಹಕರಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ ವಂದಿಸಿದರು. ವಿವೇಕಾನಂದ ಪಾಂಗಣ್ಣಾಯ ನಿರೂಪಿಸಿದರು.