ಶೃಂಗೇರಿ, ಅ.27 (ಲೋಕಬಂಧು ವಾರ್ತೆ): ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ 36ನೇ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ಸನ್ಯಾಸ ಸ್ವೀಕರಿಸಿ 49 ಸಂವತ್ಸರ ಪೂರೈಸಿರುವ ಹಿನ್ನೆಲೆಯಲ್ಲಿ ನ.10ರಂದು ಉಭಯ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಆದಿ ಶಂಕರ ಹಿಲ್ ಲೋಕಾರ್ಪಣೆಗೊಳ್ಳಲಿದೆ ಎಂದು ಶ್ರೀಮಠದ ಆಡಳಿತಾಧಿಕಾರಿ ಡಾl ವಿ. ಆರ್. ಗೌರೀಶಂಕರ್ ತಿಳಿಸಿದರು.
ನವರಾತ್ರಿ ಮಹೋತ್ಸವದಲ್ಲಿ ಭಾಗವಹಿಸಿದ ಪುರೋಹಿತರಿಗೆ ಮಠದ ಪ್ರವಚನ ಮಂದಿರದಲ್ಲಿ ಗೌರವ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು 1974ರ ನ.11ರಂದು ತಮ್ಮ ಗುರುಗಳಾದ ಶ್ರೀಮದಭಿನವ ವಿದ್ಯಾತೀರ್ಥರಿಂದ ಸನ್ಯಾಸ ಸ್ವೀಕರಿಸಿದರು.
ಅವರು ಸನ್ಯಾಸ ಸ್ವೀಕರಿಸಿ 50ನೇ ವರ್ಷಕ್ಕೆ ಪದಾರ್ಪಣ ಮಾಡುವ ಸಂದರ್ಭದಲ್ಲಿ ಶ್ರೀಮಠದಲ್ಲಿ ಹಾಗೂ ಶಾಖಾ ಮಠಗಳಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳು ಹಾಗೂ ಚಾರಿತ್ರಿಕವಾಗಿ ಚಿರಸ್ಥಾಯಿಯಾಗಿಸುವ ಸಮಾರಂಭಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಪ್ರಥಮವಾಗಿ ಶೃಂಗೇರಿಯಲ್ಲಿ ನ.10ರಂದು 600 ಟನ್ ತೂಕದ ಕುಳಿತ ಭಂಗಿಯ ಶ್ರೀ ಶಂಕರಾಚಾರ್ಯರ ಶಿಲಾ ಮೂರ್ತಿ ಲೋಕಾರ್ಪಣೆಗೊಳ್ಳಲಿದೆ. ಒಂದೇ ಶಿಲೆಯಲ್ಲಿ ಸುಮಾರು 45 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಭವ್ಯ ಮೂರ್ತಿ ಶೃಂಗೇರಿ ಆದಿ ಶಂಕರ ಹಿಲ್ ನಲ್ಲಿ ನಿರ್ಮಾಣಗೊಂಡಿದೆ.
ಗುರು ಪರಂಪರೆ ಸ್ತೋತ್ರಗಳನ್ನು ಅಳವಡಿಸಿದ ಡಾನ್ಸಿಂಗ್ಸ್ ಲೈಟ್ ಫೌಂಟೇನ್, ಮ್ಯೂಸಿಯಂ, ಗ್ರಂಥಾಲಯ, ಬುಕ್ ಸ್ಟಾಲ್ ಹಾಗೂ ಹಲವು ಚಾರಿತ್ರಿಕ ವಿಷಯಗಳನ್ನು ನೆನಪಿಸುವ ಸನ್ನಿವೇಶಗಳನ್ನು ನಿರ್ಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು ಸಾನ್ನಿಧ್ಯ ವಹಿಸಿದ್ದರು.

