-->
Gangolli: ಬೋಟ್ ಅಗ್ನಿ ದುರಂತ: 15 ದಿನದಲ್ಲಿ ಪರಿಹಾರ ಯತ್ನ

Gangolli: ಬೋಟ್ ಅಗ್ನಿ ದುರಂತ: 15 ದಿನದಲ್ಲಿ ಪರಿಹಾರ ಯತ್ನ

ಕುಂದಾಪುರ, ನ.17 (ಲೋಕಬಂಧು ವಾರ್ತೆ): ಗಂಗೊಳ್ಳಿ ಬಂದರಿನಲ್ಲಿ ಈಚೆಗೆ ನಡೆದ ಅಗ್ನಿ ದುರಂತ ನಡೆದ ಸ್ಥಳಕ್ಕೆ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಭೇಟಿ ನೀಡಿದರು.
ಅಗ್ನಿ ದುರಂತ ಸ್ಥಳ ವೀಕ್ಷಿಸಿದ ಸಚಿವೆ, ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಮೀನುಗಾರರೊಂದಿಗೆ ಚರ್ಚಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಗ್ನಿ ದುರಂತದಿಂದ ಸುಮಾರು 13ರಿಂದ 15 ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ. ಇನ್ನು 15 ದಿನಗಳಲ್ಲಿ ಪರಿಹಾರ ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. ಸ್ಥಳದಲ್ಲಿದ್ದ ಮೀನುಗಾರರು ಹಾಗೂ ಬೋಟ್ ಕಳೆದುಕೊಂಡ ಮಾಲೀಕರಿಗೆ ಸ್ವಾಂತನ ಹೇಳಿದರು.
9 ಬೋಟ್ ಗಳು ಮತ್ತು ಎರಡು ದೋಣಿಗಳು ಸಂಪೂರ್ಣ ಸುಟ್ಟಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಚಿವೆ ಹೆಬ್ಬಾಳ್ಕರ್, ಈ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಮೀನುಗಾರಿಕೆ ಮತ್ತು ಬಂದರು ಸಚಿವರೊಂದಿಗೆ ಚರ್ಚಿಸಿ ಪರಿಹಾರ ಒದಗಿಸಲಾಗುವುದು ಎಂದರು.
ಮುಂದೆ ಇಂಥ ದುರ್ಘಟನೆ ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಂದರಿನಲ್ಲಿ ಅಗ್ನಿಶಾಮಕ ದಳ ಸ್ಥಾಪನೆಗೆ ಕ್ರಮ ವಹಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಡಾ| ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಕೆ. ಅರುಣ್, ಮುಖಂಡರಾದ ಗೋಪಾಲ ಪೂಜಾರಿ, ರಮೇಶ್ ಕಾಂಚನ್ ಮೊದಲಾದವರಿದ್ದರು.

Ads on article

Advertise in articles 1

advertising articles 2

Advertise under the article