
R. Ashok: ಆರ್. ಅಶೋಕ್ ವಿಪಕ್ಷ ನಾಯಕ
Friday, November 17, 2023
ಬೆಂಗಳೂರು, ನ.17 (ಲೋಕಬಂಧು ವಾರ್ತೆ): ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕನಾಗಿ ಪದ್ಮನಾಭ ನಗರ ಕ್ಷೇತ್ರ ಶಾಸಕ ಆರ್. ಅಶೋಕ್ ಅವರನ್ನು ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದೆ.
ವೀಕ್ಷಕರ ಆಗಮನ
ವಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಪಕ್ಷದೊಳಗೆ ಅಸಮಾಧಾನ ಉಂಟಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ನಡೆದ ಶಾಸಕಾಂಗ ಪಕ್ಷದ ಸಭೆಗೆ ವೀಕ್ಷಕರಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಕುಮಾರ್ ಗೌತಮ್ ಆಗಮಿಸಿದ್ದರು.
ವಿರೋಧದ ನಡುವೆ ಆಯ್ಕೆ
ಶಾಸಕರ ಅಭಿಪ್ರಾಯಗಳನ್ನು ಆಲಿಸಿದ ವೀಕ್ಷಕರು ವಿರೋಧದ ನಡುವೆಯೂ ವಿಪಕ್ಷ ನಾಯಕನನ್ನಾಗಿ ಆರ್. ಅಶೋಕ್ ಅವರನ್ನು ನೇಮಿಸಿದ್ದಾರೆ.
ಸರಿಯಾಗಿ ನಿಭಾಯಿಸುವೆ
ಇದೇ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ಆರ್. ಅಶೋಕ್, ಪಕ್ಷ ದೊಡ್ಡ ಜವಾಬ್ದಾರಿ ನೀಡಿದೆ. ಅದನ್ನು ಸರಿಯಾಗಿ ನಿಭಾಯಿಸುತ್ತೇನೆ.
48 ಸ್ಥಾನ ಗೆಲ್ಲುವ ಗುರಿ
ಸಾಮಾನ್ಯ ಕಾರ್ಯಕರ್ತನಾಗಿ 45 ವರ್ಷಗಳಿಂದ ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ನ ದುರಾಡಳಿತವನ್ನು ಜನರ ಮುಂದಿಡಲು ಪ್ರಯತ್ನಿಸುತ್ತೇವೆ.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 28 ಸ್ಥಾನಗಳನ್ನು ಗೆಲ್ಲುವ ಗುರಿ ಹಾಕಿಕೊಳ್ಳುತ್ತೇವೆ ಎಂದು ಹೇಳಿದರು.
ಅಸಮಾಧಾನ ಸ್ಫೋಟ
ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಹೈಕಮಾಂಡ್ ವೀಕ್ಷಕರು ಪ್ರಮುಖರ ಜೊತೆ ಸಭೆ ನಡೆಸಿದ್ದರು. ವರಿಷ್ಠರ ನಿರ್ಧಾರದ ಬಗ್ಗೆ ಆಕಾಂಕ್ಷಿಗಳ ಗಮನಕ್ಕೆ ತಂದಿದ್ದರು.
ಇದೇ ವೇಳೆ ಆರ್. ಅಶೋಕ್ ನೇಮಕ ಕುರಿತು ತಿಳಿಸಿದಾಗ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಹೈಕಮಾಂಡ್ ತೀರ್ಮಾನ ಒಪ್ಪದೇ ಸಭೆಯಿಂದ ಹೊರನಡೆದರು.