
Justice: ತ್ವರಿತ ನ್ಯಾಯದಾನ: ಸಹಕರಿಸಲು ಮನವಿ
Friday, November 17, 2023
ಉಡುಪಿ, ನ.17 (ಲೋಕಬಂಧು ವಾರ್ತೆ): ಕಳೆದ ಭಾನುವಾರ ನೇಜಾರಿನ ತೃಪ್ತಿ ಲೇಔಟ್ ನ ನಾಲ್ವರ ಬರ್ಬರ ಹತ್ಯೆ ಪ್ರಕರಣವನ್ನು ಶೀಘ್ರ ಇತ್ಯರ್ಥಪಡಿಸಿ, ತ್ವರಿತವಾಗಿ ನ್ಯಾಯ ಒದಗಿಸಿಕೊಡುವಂತೆ ಮೃತ ಹಸೀನಾ ಪತಿ ನೂರ್ ಮೊಹಮ್ಮದ್ ಅವರು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಆರೋಪಿಯನ್ನು ಘಟನೆ ನಡೆದ 52 ಗಂಟೆಯೊಳಗೆ ಬಂಧಿಸಿದ ಪೊಲೀಸ್ ಇಲಾಖೆಯನ್ನು ಅಭಿನಂದಿಸಿದ ನೂರ್ ಮೊಹಮ್ಮದ್, ತಮ್ಮ ಕುಟುಂಬದ ಸಂಕಷ್ಟ ಸಮಯದಲ್ಲಿ ಸಹಕರಿಸಿ ಸಾಂತ್ವನ ಹೇಳಿದ ಎಲ್ಲಾ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು, ಸಾರ್ವಜನಿಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಕರಣದ ಶೀಘ್ರ ಇತ್ಯರ್ಥಕ್ಕಾಗಿ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಗೃಹ ಇಲಾಖೆ ವಿಶೇಷ ಸರ್ಕಾರಿ ಅಭಿಯೋಜಕರನ್ನು ನಿಯೋಜಿಸಬೇಕು. ಹಿರಿಯ ವಕೀಲ ಶಿವಪ್ರಸಾದ್ ಆಳ್ವ ಅವರನ್ನು ಸರ್ಕಾರಿ ಅಭಿಯೋಜಕರನ್ನಾಗಿ ನೇಮಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ಆಕ್ರೋಶ
ಏರ್ ಇಂಡಿಯಾ ಸಂಸ್ಥೆಯ ಉದ್ಯೋಗಿಯೋರ್ವಳನ್ನು ಅದೇ ಸಂಸ್ಥೆಯ ಉದ್ಯೋಗಿ ಅಮಾನುಷವಾಗಿ ಕೊಲೆಗೈದ ಘಟನೆ ನಡೆದು ಇಷ್ಟು ದಿನವಾದರೂ ಏರ್ ಇಂಡಿಯಾ ಸಂಸ್ಥೆ ಕನಿಷ್ಟ ಸಾಂತ್ವನ ಹೇಳಿಲ್ಲ. ಘಟನೆಯನ್ನು ಖಂಡಿಸಿಲ್ಲ ಎಂದು ಮೃತ ಹಸೀನಾ ಸಹೋದರ ಕೆ. ಅಶ್ರಫ್ ಆಕ್ರೋಶ ವ್ಯಕ್ತಪಡಿಸಿದರು.
ರಾಕ್ಷಸೀ ಪ್ರವೃತ್ತಿಯ ಪ್ರವೀಣ್ ಅರುಣ್ ಚೌಗಲೆಯನ್ನು ಏರ್ ಇಂಡಿಯಾ ಸಂಸ್ಥೆ ನೇಮಿಸಿಕೊಂಡಿರುವುದೇ ಅಪರಾಧ. ಅಂಥ ಕೆಟ್ಟ ಮನಸ್ಸಿನ ವ್ಯಕ್ತಿಯನ್ನು ಹೊಂದಿರುವುದು ಆ ಸಂಸ್ಥೆಗೇ ಕಳಂಕ ಎಂದು ಅಸಮಾಧಾನ ವ್ಯಕ್ತಪಡಿಸಿದರು.