-->
Attimabbe: ಬದುಕನ್ನೇ ಕಾವ್ಯವಾಗಿಸಿದ ಅತ್ತಿಮಬ್ಬೆ

Attimabbe: ಬದುಕನ್ನೇ ಕಾವ್ಯವಾಗಿಸಿದ ಅತ್ತಿಮಬ್ಬೆ

ದಾನಚಿಂತಾಮಣಿ ಖ್ಯಾತಿಯ ಅತ್ತಿಮಬ್ಬೆ, ಚಾಲುಕ್ಯರ ಆಸ್ಥಾನದಲ್ಲಿ ಮುಖ್ಯಮಂತ್ರಿ ಮತ್ತು ಸೇನಾಪತಿಯಾಗಿದ್ದ ಧಲ್ಲಪನ ಹಿರಿಯ ಮಗ ನಾಗದೇವನನ್ನು ಕ್ರಿ.ಶ. 965ರಲ್ಲಿ ವಿವಾಹವಾದರು.ಆದರೆ, ದುರಾದೃಷ್ಟವಶಾತ್ ಕ್ರಿ.ಶ. 984ರಲ್ಲಿ ಯುದ್ಧಭೂಮಿಯಲ್ಲಿ ಆಕೆಯ ಪತಿ ವೀರಮರಣವನ್ನಪ್ಪುತ್ತಾನೆ. ಆಗ ಆಕೆಯ  ವಯಸ್ಸು 34 ವರ್ಷ!

ನಾಗದೇವನ ಮರಣದ ಕುರಿತು ರಾಜ ತೈಲಪ 2 ಸ್ವತಃ ಬಂದು ಅತ್ತಿಮಬ್ಬೆಗೆ ಸಂತಾಪ ಸೂಚಿಸುತ್ತಾನೆ.

ಪತಿ ವಿಯೋಗದ ನಂತರ ಅತ್ತಿಮಬ್ಬೆ ಜೈನ ಧರ್ಮವನ್ನು ಅನುಸರಿಸಿ ಸರಳ ಧಾರ್ಮಿಕ ಜೀವನವನ್ನು ನಡೆಸುತ್ತಾಳೆ.

ಆಕೆ ತನ್ನ ಜೀವನದಲ್ಲಿ 1,500 ಜೈನ ಬಸದಿಗಳನ್ನು ನಿರ್ಮಿಸಲು ಕಾರಣೀಭೂತಳಾಗುತ್ತಾಳೆ. 1,500 ಜಿನಬಿಂಬಗಳ ನಿರ್ಮಾಣ, ಅವುಗಳಿಗೆ ಚಿನ್ನದ ಗಂಟೆ ಮತ್ತು ದೈನಂದಿನ ಪೂಜೆಯ ದೀಪವನ್ನು ಉಡುಗೊರೆಯಾಗಿ ನೀಡಿದ್ದಳು.

ರನ್ನ ಕವಿಗೆ ಆಶ್ರಯ ಮತ್ತು ಸ್ಪೂರ್ತಿಯನ್ನು ನೀಡುತ್ತಾಳೆ. ಅವಳ ಆಶ್ರಯದಲ್ಲಿ ರನ್ನ ಕವಿ ಅಜಿತ ಪುರಾಣ ರಚಿಸುತ್ತಾನೆ.

ಪೊನ್ನನ ಶಾಂತಿಪುರಾಣದ ಒಂದು ಸಾವಿರ ಪ್ರತಿಗಳನ್ನು ತಾಳೆಗರಿಗಳಲ್ಲಿ ಬರೆಯಿಸಿ ಅವುಗಳನ್ನು ಶಾಸ್ತ್ರ ದಾನ ಎಂದು ಜಿನ ಬೋಧಕರು ಮತ್ತು ವಿದ್ವಾಂಸರಿಗೆ ಹಂಚಿದಳು.

ಅವಳ ಜೀವನವು ಕಲೆ ಮತ್ತು ಧರ್ಮದ ಪುನರುಜ್ಜೀವನಕ್ಕೆ ಮೀಸಲಾಯಿತು.

ದಾನಚಿಂತಾಮಣಿ ಎಂಬ ಬಿರುದು ಪಡೆದ ಅತ್ತಿಮಬ್ಬೆ, ಕ್ರಿ. ಶ. 1002ರಲ್ಲಿ ಲಕ್ಕುಂಡಿಯಲ್ಲಿ ವಿಶಾಲವಾದ ಜೈನ ಬಸದಿ ನಿರ್ಮಿಸಿದಳು. ಅದರ ನಿರ್ವಹಣೆಗೆ ಅಗತ್ಯವಾದ ದಾನ- ದತ್ತಿಗಳನ್ನೂ ಅವಳೇ ನೀಡಿದಳು.

ಅವಳ ಮರಣದ ನಂತರ ಸ್ಥಾಪಿತವಾದ ಅನೇಕ ಶಾಸನಗಳು ಮತ್ತು ಹಲವು ಕವಿಗಳು ಅವಳ ಹಿರಿಮೆಯನ್ನು ಹೊಗಳಿದ್ದಾರೆ.

ಅತ್ತಿಮಬ್ಬೆ ಸ್ವತಃ ಕಾವ್ಯ ಬರೆಯದಿದ್ದರೂ ಆಕೆಯ ಬದುಕೇ ಮಹಾಕಾವ್ಯದಂಥ ಬಾಳನ್ನು ಬಾಳಿದಳು, ಬೆಳಗಿದಳು, ಆಳಿದಳು.

ಕರ್ನಾಟಕದ ಸಾಹಿತ್ಯ- ಸಂಸ್ಕೃತಿಯ ಇತಿಹಾಸದಲ್ಲಿ ದಾನ ಚಿಂತಾಮಣಿ ಅತ್ತಿಮಬ್ಬೆಯ ಕೊಡುಗೆ ಅನನ್ಯ.
ಕನ್ನಡ ಸಾಹಿತ್ಯ ಕೃಷಿಯಲ್ಲಿ ಅಸಾಧಾರಣ ಸಾಧನೆ ಮಾಡುತ್ತಿರುವ ಮಹಿಳೆಯರನ್ನು ಗೌರವಿಸುವ ಉದ್ದೇಶದಿಂದ ಕರ್ನಾಟಕ ಸರಕಾರ ಅತ್ತಿಮಬ್ಬೆಯ ಸಹಸ್ರಮಾನದ ವರ್ಷದಿಂದ ಅತ್ತಿಮಬ್ಬೆ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿದೆ.

1995ರಲ್ಲಿ  ಸ್ಥಾಪನೆಗೊಂಡ ಪ್ರಶಸ್ತಿ ಪ್ರಶಸ್ತಿಪತ್ರ, ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 5 ಲಕ್ಷ ರೂ. ನಗದನ್ನು ಒಳಗೊಂಡಿದೆ.

-✍️ ಸುಬ್ರಹ್ಮಣ್ಯ ಬಾಸ್ರಿ, ಉಡುಪಿ

Ads on article

Advertise in articles 1

advertising articles 2

Advertise under the article