
NEP: ಎನ್ಇಪಿ ರದ್ದತಿಯಿಂದ ಶಿಕ್ಷಣ ಕ್ಷೇತ್ರಕ್ಕೆ ಅನಾಹುತ
Saturday, November 18, 2023
ಉಡುಪಿ, ನ.18 (ಲೋಕಬಂಧು ವಾರ್ತೆ): ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ರದ್ದುಪಡಿಸುವುದರಿಂದ ಶಿಕ್ಷಣ ಕ್ಷೇತ್ರಕ್ಕೆ ಅನಾಹುತ ಆಗುತ್ತದೆ ಎಂದು ಚಿಕ್ಕಮಗಳೂರು ಮಾಜಿ ಶಾಸಕ ಸಿ. ಟಿ. ರವಿ ಹೇಳಿದರು.ಶನಿವಾರ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ರಾಜ್ಯ ಸರಕಾರ ಇದನ್ನು ಪರಿಗಣಿಸಿದೇ ರಾಜಕೀಯ ಮಾಡುತ್ತಿದೆ. ಶಿಕ್ಷಣ, ದೇಶ ಕಟ್ಟುವ ಮಾಧ್ಯಮ. ಭವಿಷ್ಯದ ಸವಾಲುಗಳನ್ನು ಎದುರಿಸಲೇಬೇಕಾದ ಜ್ಞಾನವನ್ನು ಶಿಕ್ಷಣ ತಯಾರು ಮಾಡಬೇಕು. ಮಕ್ಕಳಲ್ಲಿ ರಾಷ್ಟ್ರೀಯ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಶಿಕ್ಷಣ ರೂಪಿಸಬೇಕು. ಸ್ವಾಭಿಮಾನಿ, ಸ್ವಾವಲಂಬಿ ಆಗದ ಜನಾಂಗದಿಂದ ಆತ್ಮನಿರ್ಭರ ಭಾರತ ಅಸಾಧ್ಯ ಎಂದರು.
ಹಿಂದೆ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ರಾಷ್ಟ್ರೀಯ ನೀತಿಗೆ ಪೂರಕ ಅಭಿಪ್ರಾಯ ಕೊಟ್ಟಿದ್ದರು. ಇದೀಗ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುವುದಿಲ್ಲ ಎಂದು ಹಠಮಾರಿತನ ತೋರಿಸುತ್ತಿದ್ದಾರೆ. ಶಿಕ್ಷಣ ನೀತಿಯನ್ನು ರಾಜಕೀಯ ಮಾಡುವ ಚಪಲತೆಯಿಂದಾಗಿ ಹಾಗೆ ಮಾಡುತ್ತಿದ್ದಾರೆ.
ಒಂದು ವೇಳೆ ನೀತಿಯಲ್ಲಿ ದೋಷಗಳಿದ್ದರೆ ಹೇಳಲಿ, ಸರಿಪಡಿಸಬಹುದು. ಕಾಂಗ್ರೆಸ್ ನಂಥ ಹಿರಿಯ ಪಕ್ಷ ಮಾಡುವ ಕೆಲಸ ಇದಲ್ಲ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಯಾವುದಕ್ಕಾಗಿ ವಿರೋಧಿಸಲಾಗುತ್ತದೆ? ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ ನಿಮ್ಮ ವಿರೋಧವೇ? ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ಪಡೆಯಲು ವಿರೋಧವೇ ಎಂದು ಸಿ. ಟಿ. ರವಿ ಪ್ರಶ್ನಿಸಿದರು.
ಪ್ರಾದೇಶಿಕ ಭಾಷೆ ಕಲಿಕೆಯಿಂದ ಮನೋವಿಕಾಸವಾಗುತ್ತದೆ. ಮಾತೃಭಾಷೆ ಜೊತೆಗೆ ಇನ್ನೆರಡು ಭಾಷೆ ಕಲಿಯಬಹುದು. ಭಾಷಾ ಬಾಂಧವ್ಯ ನಿರ್ಮಾಣ ನಿಮಗೆ ಸಹ್ಯ ಆಗುತ್ತಿಲ್ಲವೇ? ನಾವು ಅನ್ಯ ಭಾಷಿಗರ ಜೊತೆ ಜಗಳವಾಡಬೇಕೇ ಎಂದು ಪ್ರಶ್ನಿಸಿದರು.
ಇಂದಿನ ಶಿಕ್ಷಣ ನಿರುದ್ಯೋಗಿಗಳನ್ನು ನಿರ್ಮಾಣ ಮಾಡುತ್ತಿದೆ. ಕೇವಲ ಸರ್ಟಿಫಿಕೇಟ್ ನೀಡುವುದು ಶಿಕ್ಷಣದ ಕೆಲಸವಲ್ಲ. ಕೌಶಲ್ಯದ ತರಬೇತಿ ನೀಡುವುದು ಅಪರಾಧವೇ ಎಂಬಿತ್ಯಾದಿ ಅನುಮಾನಗಳು ಮೂಡುತ್ತವೆ.
ಬಡ ಮಕ್ಕಳನ್ನು ರಾಷ್ಟ್ರೀಯ ಶಿಕ್ಷಣ ನೀತಿಯಿಂದ ವಂಚಿಸಬೇಡಿ. ಡಿಕೆಶಿ, ಎಂ.ಬಿ. ಪಾಟೀಲ್, ಪರಮೇಶ್ವರ ನಡೆಸುವ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಇದೆ ಎಂದು ಮಾಜಿ ಶಾಸಕ ರವಿ ಹೇಳಿದರು.
ಕರ್ನಾಟಕ ರಿವರ್ಸ್ ಗೇರ್
ಕರ್ನಾಟಕವನ್ನು ರಿವರ್ಸ್ ಗೇರ್ ನಲ್ಲಿ ತೆಗೆದುಕೊಂಡು ಹೋಗುತ್ತಿರಾ? ಆಕ್ರಮಣಕಾರಿಗಳನ್ನು ವೈಭವೀಕರಿಸುವುದು ಹೆಮ್ಮೆಯ ಸಂಗತಿಯಲ್ಲ. ಪ್ರಾಚೀನ ಜ್ಞಾನದ ಬಗ್ಗೆ ಇವತ್ತಿನ ಶಿಕ್ಷಣದಲ್ಲಿ ಯಾವುದೇ ಮಾಹಿತಿ ಇಲ್ಲ. ಅಲೆಕ್ಸಾಂಡರ್, ಅಕ್ಬರ್ ದಿ ಗ್ರೇಟ್ ಎಂಬ ಮನಃಸ್ಥಿತಿಯಲ್ಲಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ ಸಿ.ಟಿ. ರವಿ, ಪೂರ್ವಿಕರ ಸಾಧನೆಗೆ ಹೆಮ್ಮೆಪಡೋಣ, ಕೀಳರಿಮೆ ಬೇಡ. ನ್ಯಾಕ್ ಗ್ರೇಡ್ ಕೊಡುತ್ತದೆ. ಅದರಿಂದ ಗ್ರಾಂಟ್ ಸಿಗುತ್ತದೆ ಎಂದರು.
ಸ್ಪೀಕರ್ ಸ್ಥಾನ ಮೌಲ್ವಿ ಹುದ್ದೆಯಲ್ಲ
ಮುಸ್ಲಿಮರಿಗೆ ಕಾಂಗ್ರೆಸ್ ಪ್ರಧಾನ್ಯತೆ ನೀಡುತ್ತಿದೆ ಎಂಬ ಶಾಸಕ ಜಮೀರ್ ಭಾಷಣ ವಿಚಾರದಲ್ಲಿ ತಿರುಗೇಟು ನೀಡಿದ ಸಿ. ಟಿ. ರವಿ, ಸ್ಪೀಕರ್ ಸ್ಥಾನ ಸಾಂವಿಧಾನಿಕ ಹುದ್ದೆ. ಆ ಸ್ಥಾನ ಮಸೀದಿಯ ಮೌಲ್ವಿ ಹುದ್ದೆಯಲ್ಲ. ಬಿಜೆಪಿ ಮೌಲ್ವಿಗೆ ಜೀ ಹುಜೂರ್ ಅನ್ನುತ್ತಿಲ್ಲ. ಆ ಹುದ್ದೆಗೆ ಸಿಗುವ ಗೌರವ ಜಾಮಿಯ ಮಸೀದಿಯ ಮುಲ್ಲಾನಿಗೆ ಸಿಗುವ ಗೌರವ ಅಲ್ಲ.
ಖಾದರ್ ಘನತೆ ಹಾಳು ಮಾಡಬೇಡಿ. ಸಂವಿಧಾನದ ಬಗ್ಗೆ ಅರ್ಥ ಗೊತ್ತಿಲ್ಲದ ಜಮೀರ್ ಅಂಥವರು ಶಾಸಕರಾದರೆ ಹೀಗೇ ಆಗುವುದು ಎಂದರು.
ಯತೀಂದ್ರ ನಡೆ ಅನುಮಾನಕರ
ಕರ್ನಾಟಕದಲ್ಲಿ ಯತೀಂದ್ರ ಶಾಡೋ ಸಿಎಂ ಅಭಿಯಾನ ವಿಚಾರ ಬಗ್ಗೆ ಮಾತನಾಡಿದ ಶಾಸಕ ರವಿ, ರಾಜ್ಯದಲ್ಲಿ ವೈ ಎಸ್ ಟಿ ಟ್ಯಾಕ್ಸ್ ಆರೋಪ ಕೇಳಿಬಂದಿತ್ತು. ಈಗ ಆಡಿಯೋ ವೀಡಿಯೊ ರಿಲೀಸ್ ಆಗಿದೆ. ಮಾಜಿ ಶಾಸಕ ಯತೀಂದ್ರ ನಡೆ ಬಹಳ ಅನುಮಾನ ಮೂಡಿಸುತ್ತಿದೆ. ಸಿದ್ದರಾಮಯ್ಯ ಅವರು ಯತೀಂದ್ರ ಮಾತಿಗೆ ಹೆಚ್ಚು ಬೆಲೆ, ಮನ್ನಣೆ ಕೊಡುತ್ತಿದ್ದಾರೆ. ಇದೀಗ ಶಾಡೋ ಸಿಎಂ ಗುಟ್ಟಾಗಿ ಉಳಿದಿಲ್ಲ. ಹಾಗಾಗಿ ಆ ಆರೋಪ ಬಂದಿದೆ ಎಂದರು.
ಕಾಂಗ್ರೆಸ್ ನ್ನು ಟೀಕಿಸುತ್ತಿದ್ದ ಬಿಜೆಪಿಯಲ್ಲೂ ಅಪ್ಪ ಮಕ್ಕಳ ರಾಜ್ಯಭಾರ ನಡೆಯುತ್ತಿದೆ ಎಂಬ ಆರೋಪ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಸಿ.ಟಿ. ರವಿ, ಪ್ರಧಾನಿಯನ್ನೊಳಗೊಂಡ ವರಿಷ್ಠರು ಆ ನಿರ್ಧಾರ ತೆಗೆದುಕೊಂಡಿದ್ದಾರೆ. ಪಾರ್ಲಿಮೆಂಟರಿ ಬೋರ್ಡ್, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ಕೈಗೊಂಡ ತೀರ್ಮಾನ ಅದು.
ಆದರೆ, ಇಂಥ ಪ್ರಶ್ನೆಗಳು ಕೇಳಿಬರುತ್ತಿರುವುದು ನಿಜ. ಈ ಬಗ್ಗೆ ನಾನು ಈ ಸಂದರ್ಭದಲ್ಲಿ ಚರ್ಚೆ ಮಾಡುವುದಿಲ್ಲ. ಚರ್ಚಿಸಲು ಹೊರಟರೆ ಬೇರೆ ಬೇರೆ ಅರ್ಥಗಳು ಹುಟ್ಟಿಕೊಳ್ಳುತ್ತವೆ. ಹೊಸ ಅಧ್ಯಕ್ಷರ ನೇತೃತ್ವದಲ್ಲಿ ಪಕ್ಷ ಸದೃಢವಾಗಿ ಬೆಳೆಯಲಿ ಎಂದು ಹಾರೈಸುವುದಾಗಿ ತಿಳಿಸಿದರು.
ಬಿಜೆಪಿಯಿಂದ ನಿರ್ಲಕ್ಷ್ಯ ಬಿಜೆಪಿಯಿಂದ ಉತ್ತರ ಕರ್ನಾಟಕ ನಿರ್ಲಕ್ಷ್ಯ ಎಂಬ ಯತ್ನಾಳ್ ಮತ್ತು ಬೆಲ್ಲದ್ ವಿರೋಧ ಬಗ್ಗೆ ಪ್ರತಿಕ್ರಿಯಿಸಿ, ನಾಯಕರ ಆಯ್ಕೆಯಲ್ಲಿ ಯಾವ ಭಾಗ ಎಂದು ಬರುವುದಿಲ್ಲ.
ಉತ್ತರ ಕರ್ನಾಟಕದ ಬೊಮ್ಮಾಯಿ ಎರಡು ವರ್ಷ ಸಿಎಂ ಆಗಿದ್ದರು. ವಿಪಕ್ಷ ನಾಯಕನ ಆಯ್ಕೆ ಸಮಗ್ರ ಕರ್ನಾಟಕಕ್ಕೆ ಸೇರಿದ್ದು, ಇಬ್ಬರು ನಾಯಕರ ಆಯ್ಕೆಯಾಗಿದೆ. ರಾಜ್ಯ ಬಿಜೆಪಿಗೆ ನಾಯಕನನ್ನು ಆಯ್ಕೆ ಮಾಡಲಾಗಿದೆ ಎಂದ ರವಿ, ಆರ್. ಅಶೋಕ್ ಸಮರ್ಥ ವಿಪಕ್ಷ ನಾಯಕನಾಗಿ ಎಲ್ಲಾ ಟೀಕೆಗೆ ಉತ್ತರಿಸುತ್ತಾರೆ.
ನಾಯಕರಾದ ನಿರ್ಮಲಾ ಸೀತಾರಾಮನ್, ದುಷ್ಯಂತ್ ಜೊತೆ ನಮ್ಮೆಲ್ಲಾ ನಾಯಕರ ಅಭಿಪ್ರಾಯ ಸಂಗ್ರಹಿಸಲಾಗಿದೆ. ನಮ್ಮೆಲ್ಲ ಶಾಸಕರ ಜೊತೆ ಮಾತನಾಡಿ ನಿರ್ಣಯವಾಗಿದೆ ಎಂದರು.
ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷೆ ಬಗ್ಗೆ ಕೇಳಿದ ಪ್ರಶ್ನೆಗೆ, ನಾನು 1994ರ ನಂತರ ಯಾವುದೇ ಸ್ಥಾನ ಕೇಳಿ ಪಡೆದಿಲ್ಲ. ನಾನು ಆಕಾಂಕ್ಷಿಯಲ್ಲ, ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ಪಕ್ಷದ ಗೆಲುವಿಗೆ ಶಕ್ತಿ ಮೀರಿ ಶ್ರಮ ಹಾಕುತ್ತೇನೆ ಎಂದರು.
ಬಿಜೆಪಿ ರಾಜ್ಯ ಅಧ್ಯಕ್ಷ ಸ್ಥಾನ ವಿಚಾರದಲ್ಲಿ ಸಿ.ಟಿ. ರವಿ ಅಸಮಾಧಾನ ವಿಚಾರ ಬಗ್ಗೆ ಕೇಳಿದಾಗ, ನಾನು ರೇಸ್ ನಲ್ಲಿ ಇಲ್ಲ ಎಂದು ಮೂರು ತಿಂಗಳ ಹಿಂದೆ ಸ್ಪಷ್ಟಪಡಿಸಿದ್ದೆ. ರೇಸ್ ನಲ್ಲಿ ಇಲ್ಲ ಎಂದಮೇಲೆ ಬೇಸರದ ಪ್ರಶ್ನೆ ಬರುವುದಿಲ್ಲ ಜವಾಬ್ದಾರಿ ಯಾವಾಗ ಯಾರಿಗೆ ಕೊಡಬೇಕು ಎಂದು ವರಿಷ್ಠರು ತೀರ್ಮಾನಿಸುತ್ತಾರೆ. ನಾವು ತಂಡವಾಗಿ ಕೆಲಸ ಮಾಡುತ್ತೇವೆ, ಚರ್ಚೆ ಮಾಡಲು ಬಯಸುವುದಿಲ್ಲ ಎಂದರು.
ಬಹು ನಿರೀಕ್ಷೆಯ ರಾಜ್ಯ ಘಟಕದ ಅಧ್ಯಕ್ಷರು, ವಿಪಕ್ಷ ನಾಯಕರ ಆಯ್ಕೆ ಪೂರ್ಣಗೊಂಡಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಬಿಜೆಪಿ ಮತ್ತಷ್ಟು ಬಲಾಢ್ಯವಾಗಿ ಬೆಳೆಯಲಿ. ಕಾರ್ಯಕರ್ತರ ಭಾವನೆ, ಜನಸಾಮಾನ್ಯರ ಆಶೋತ್ತರ ಗಮನಿಸಿ ಪಕ್ಷ ಬೆಳೆಸಲಿ. ಮುಂದಿನ ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಜಯಭೇರಿ ಬಾರಿಸುವಂತೆ ಮುನ್ನಡೆಸಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.
ನಾಲ್ವರ ಹತ್ಯೆ ಖಂಡನೀಯ
ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಖಂಡನೀಯ. ಉಡುಪಿಯಂಥ ಸಾತ್ವಿಕರ, ಸುಸಂಸ್ಕೃತ ನಾಗರಿಕರ ಜಿಲ್ಲೆಯಲ್ಲಿ ಹೀಗಾಗಬಾರದಿತ್ತು.
ತ್ವರಿತ ಗತಿಯಲ್ಲಿ ಅಪರಾಧಿಯನ್ನು ಪತ್ತೆಹಚ್ಚಿರುವುದು ಪೊಲೀಸರ ಸಾಮಥ್ರ್ಯಕ್ಕೆ ಹಿಡಿದ ಕನ್ನಡಿ. ಇಲ್ಲವಾದಲ್ಲಿ ನೂರಾರು ಊಹಾಪೋಹಗಳು ಹಬ್ಬಿ ಸಮಸ್ಯೆ ಎದುರಿಸಬೇಕಾಗಿತ್ತು.
ಸಮರ್ಥವಾಗಿ ಸಾಕ್ಷ್ಯಾಧಾರ ಸಂಗ್ರಹಿಸಿ, ಆರೋಪಿ ನ್ಯಾಯಾಲಯದಲ್ಲಿ ತಪ್ಪಿಸಿಕೊಳ್ಳದೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು ಎಂದು ಸಿ.ಟಿ. ರವಿ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿ ಅಮೀನ್, ಜಿಲ್ಲಾ ವಕ್ತಾರ ಕೆ. ರಾಘವೇಂದ್ರ ಕಿಣಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕರ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಕಾರ್ಯದರ್ಶಿ ಗುರುಪ್ರಸಾದ್ ಶೆಟ್ಟಿ ಕಟಪಾಡಿ ಇದ್ದರು.