
Udupi: ಕಮ್ಮಟಗಳಿಂದ ಹೊಸ ಕಥೆಗಾರ ಸೃಷ್ಟಿ: ಪ್ರೊ. ಹಿರಿಯಡಕ
Thursday, November 16, 2023
ಉಡುಪಿ, ನ.16 (ಲೋಕಬಂಧು ವಾರ್ತೆ): ವಿದ್ಯಾರ್ಥಿಗಳೂ ಸೇರಿದಂತೆ ಯುವ ಜನತೆ ಹಿರಿಯ ಸಾಹಿತಿಗಳ ಸಾಹಿತ್ಯ ಓದಬೇಕು. ಕಮ್ಮಟಗಳಲ್ಲಿ ಭಾಗವಹಿಸುವುದರಿಂದ ಕಥೆಗಾರರಾಗಲು ಸಾಧ್ಯ ಎಂದು ಹಿರಿಯ ವಿಮರ್ಶಕ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡಕ ಹೇಳಿದರು.
ಎಂ.ಜಿ.ಎಂ ಕಾಲೇಜಿನ ಕನ್ನಡ ಸಾಹಿತ್ಯ ಸಂಘ ಮತ್ತು ಐಕ್ಯೂಎಸಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಆಶ್ರಯದಲ್ಲಿ ಎಂ.ಜಿ.ಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಜಿಲ್ಲೆಯ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಗುರುವಾರ ಏರ್ಪಡಿಸಿದ್ದ ಕಥಾ ಕಮ್ಮಟ ಉದ್ಘಾಟಿಸಿ ಮಾತನಾಡಿದರು.
ಕನ್ನಡದಲ್ಲಿ ಹಲವು ಲೇಖಕರು ಅತ್ಯುತ್ತಮ ಕಥೆಗಳನ್ನು ಬರೆದು ನಾಡಿನ ಬೇರೆ ಬೇರೆ ಭಾಷೆಗಳಿಗೆ ಭಾಷಾಂತರಗೊಳಿಸಿ, ಕನ್ನಡಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದವರು ಹೇಳಿದರು.
ಮಾಸ್ತಿ , ಶಿವರಾಮ ಕಾರಂತ, ಲಂಕೇಶ್ , ಅನಂತಮೂರ್ತಿ, ವೈದೇಹಿ ಮೊದಲಾದವರ ಕಥೆಗಳನ್ನು ವಿದ್ಯಾರ್ಥಿಗಳು ಓದಬೇಕು ಎಂದು ಪ್ರೊ. ಹಿರಿಯಡಕ ಸಲಹೆ ನೀಡಿದರು.
ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು.
ಪರಿಷತ್ ಸಹ ಕಾರ್ಯದರ್ಶಿ ಮೋಹನ್ ಉಡುಪ ಹಂದಾಡಿ, ಎಂ.ಜಿ.ಎಂ ಕಾಲೇಜು ಐಕ್ಯೂಎಸಿ ಮುಖ್ಯಸ್ಥೆ ಪ್ರೊ. ಶೈಲಜ, ಕಸಾಪ ಹೆಬ್ರಿ ತಾಲೂಕು ಘಟಕ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಇದ್ದರು.
ಎಂ.ಜಿ.ಎಂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾl ಪುತ್ತಿ ವಸಂತ ಕುಮಾರ್ ಸ್ವಾಗತಿಸಿದರು. ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಜನಾರ್ದನ ಕೊಡವೂರು ನಿರೂಪಿಸಿದರು. ಕಸಾಪ ತಾಲೂಕು ಘಟಕಾಧ್ಯಕ್ಷ ರವಿರಾಜ್ ಎಚ್. ಪಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಘವೇಂದ್ರ ಪ್ರಭು ಕರ್ವಾಲು ವಂದಿಸಿದರು.