.jpg)
ಅಭಿವೃದ್ಧಿ ಕಾಮಗಾರಿಗಳಲ್ಲಿ ವಿಳಂಬ ಧೋರಣೆ ಸಹಿಸಲಾಗದು
Friday, November 24, 2023
ಉಡುಪಿ, ನ.24 (ಲೋಕಬಂಧು ವಾರ್ತೆ): ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಕೈಗೊಂಡಿರುವ ಕಾಮಗಾರಿಗಳ ಕುರಿತು ವಿಳಂಬ ಧೋರಣೆ ತಾಳದೇ ಎಲ್ಲ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು. ತಪ್ಪಿದಲ್ಲಿ ಅಂಥ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಚ್ಚರಿಕೆ ನೀಡಿದರು.ಶುಕ್ರವಾರ ರಜತಾದ್ರಿಯ ಜಿ.ಪಂ. ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ)ಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೈಂದೂರು ತಾಲೂಕಿನ ಮರವಂತೆಯಲ್ಲಿ ಹೊರ ಬಂದರು, ಗಂಗೊಳ್ಳಿ ಮೀನುಗಾರಿಕೆ ಬಂದರಿನ ಮರು ನಿರ್ಮಾಣ ಮತ್ತು ಗಂಗೊಳ್ಳಿ ಮೀನುಗಾರಿಕೆ ಬಂದರು ಹಾಗೂ ಕೋಡಿ ಜೆಟ್ಟಿಯ ನ್ಯಾವಿಗೇಷನ್ ಚಾನೆಲ್ ನಲ್ಲಿ ಹೂಳೆತ್ತುವ ಕಾಮಗಾರಿಗಳನ್ನು ತಾಂತ್ರಿಕ ಸಮಸ್ಯೆಗಳಿಂದಾಗಿ ಕೈಗೊಳ್ಳದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಬಂದರು ಇಲಾಖೆ ಹಾಗೂ ಸಿಆರ್.ಝಡ್.ನವರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ಕಾಮಗಾರಿಗಳನ್ನು ತ್ವರಿತವಾಗಿ ಗುಣಮಟ್ಟದೊಂದಿಗೆ ಕೈಗೊಳ್ಳುವುದರೊಂದಿಗೆ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸೂಚನೆ ನೀಡಿದರು.
ಕೃಷಿ ಮತ್ತು ತೋಟಗಾರಿಕೆ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನುಗಳ ಬಗ್ಗೆ ಮಾತನಾಡಿದ ಅವರು, ಈ ಬಾರಿ ಭತ್ತದ ಇಳುವರಿ ಶೇ. 50ರಷ್ಟು ಕಡಿಮೆಯಾಗಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ತಾಲೂಕುವಾರು ವಿವರ ಸಂಗ್ರಹಿಸಲು ಸೂಚಿಸಿದರು.
ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ. 22ರಷ್ಟು ಕಡಿಮೆ ಮಳೆಯಾಗಿದ್ದು, ಅಂತರ್ಜಲ ಮಟ್ಟವೂ ಶೇ. 24ರಷ್ಟು ಕಡಿಮೆಯಾಗಿದೆ. ಮುಂಬರುವ ಬೇಸಿಗೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಈಗಿನಿಂದಲೇ ಕೈಗೊಳ್ಳಬೇಕು. ಬಾಕಿ ಉಳಿದಿರುವ ಕುಡಿಯುವ ನೀರಿನ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಬೇಕು ಎಂದರು.
ಜಿಲ್ಲೆಯಲ್ಲಿ 604 ಕಿಂಡಿ ಅಣೆಕಟ್ಟುಗಳಿದ್ದು, ಅವುಗಳಲ್ಲಿ 357 ಕಿಂಡಿ ಅಣೆಕಟ್ಟುಗಳಿಗೆ ತಡೆ ಹಲಗೆ ಅಳವಡಿಸಲಾಗಿದೆ. ಬಾಕಿ ಉಳಿದಿರುವ 343 ಕಿಂಡಿ ಅಣೆಕಟ್ಟುಗಳಿಗೆ ತಡೆ ಹಲಗೆಗಳನ್ನು ಕೂಡಲೇ ಅಳವಡಿಸಲು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಸಚಿವೆ ಹೆಬ್ಬಾಳ್ಕರ್, ಉಡುಪಿ ನಗರಕ್ಕೆ ವಾರಾಹಿ ಕುಡಿಯುವ ನೀರಿನ ಯೋಜನೆಯನ್ನು ಫೆಬ್ರವರಿಯಲ್ಲಿ ಪೂರ್ಣಗೊಳಿಸಲು ಸೂಚಿಸಿದರು.
ಉಪ್ಪು ನೀರು ತಡೆ 11 ಕಾಮಗಾರಿ ವರದಿಗೆ ಪ್ರಾದೇಶಿಕ ನಿರ್ದೇಶಕರಿಂದ (ಪರಿಸರ) ಅನುಮೋದನೆ ಪಡೆದು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಲು ಆದೇಶಿಸಿದರು.
ನಗರೋತ್ಥಾನ ನಾಲ್ಕನೇ ಹಂತದ ಕಾಮಗಾರಿಗಳಲ್ಲಿ ಅನುಮೋದನೆಯಾದ 71 ಕಾಮಗಾರಿಗಳಲ್ಲಿ 32 ಪೂರ್ಣಗೊಂಡಿದ್ದು, ಬಾಕಿ ಉಳಿದಿರುವ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದರು.
ಡೀಮ್ಡ್ ಫಾರೆಸ್ಟ್ ಪ್ರಕರಣಗಳ ಬಗ್ಗೆ ಚರ್ಚಿಸಲಾಯಿತು. ಜೊತೆಗೆ ಕುಮ್ಕಿ ಜಾಗದಲ್ಲಿ ಮನೆ ಕಟ್ಟಿರುವ 94 ಸಿಸಿಯಡಿಯಲ್ಲಿ ಅರ್ಜಿ ಹಾಕಿರುವ ಬಗ್ಗೆಯೂ ಚರ್ಚೆ ನಡೆಯಿತು. ಅರ್ಜಿಗಳನ್ನು ಯಾವುದೇ ಕಾರಣಕ್ಕೂ ತಿರಸ್ಕರಿಸಬಾರದು ಎಂದ ಸಚಿವೆ, ಗಂಗೊಳ್ಳಿ ದೋಣಿ ಅಗ್ನಿ ದುರಂತ ಸಂತ್ರಸ್ತರಿಗೆ ಶೀಘ್ರ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಜಿಲ್ಲೆಯಲ್ಲಿ 3.12 ಲಕ್ಷ ಕುಟುಂಬಗಳಿದ್ದು, ಆ ಪೈಕಿ 1,83,072 ಕುಟುಂಬದ ಯಜಮಾನಿಯರು ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿರುವ ಕೊರಗ ಹಾಗೂ ಮಲೆಕುಡಿಯ ಜನಾಂಗದವರಿಗೂ ಗೃಹಲಕ್ಷ್ಮಿ ಯೋಜನೆ ತಲುಪುವ ದೃಷ್ಟಿಯಿಂದ ವಿಶೇಷ ಅಭಿಯಾನ ನಡೆಸಬೇಕು. ಯಾವುದೇ ಕುಟುಂಬ ಈ ಯೋಜನೆಯಿಂದ ತಪ್ಪದಂತೆ ನೋಡಿಕೊಳ್ಳಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಕರಾವಳಿಯ ಪಾರಂಪರಿಕ ಕ್ರೀಡೆಯಾದ ಕೋಳಿ ಅಂಕಕ್ಕೆ ಅನುಮತಿ ನೀಸುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಸಲ್ಲಿಸಿದ ಮನವಿಯನ್ನು ಆಲಿಸಿದ ಸಚಿವೆ ಹೆಬ್ಬಾಳ್ಕರ್, ಕೋಳಿ ಅಂಕದ ವೇಳೆ ಯಾವುದೇ ಜೂಜು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಹೇಳಿದರು.
ಸಭೆಯಲ್ಲಿ ಶಾಸಕರಾದ ಯಶಪಾಲ್ ಸುವರ್ಣ, ಸುನಿಲ್ ಕುಮಾರ್, ಗುರುರಾಜ್ ಶೆಟ್ಟಿ ಗಂಟಿಹೊಳೆ, ಕಿರಣ್ ಕೊಡ್ಗಿ ಮತ್ತು ಗುಮರ್ೆ ಸುರೇಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ, ಜಿ. ಪಂ. ಸಿಇಓ ಪ್ರಸನ್ನ ಹೆಚ್, ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಡಾ| ಅರುಣ್ ಕೆ., ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್, ಡಿಎಫ್ಒ ಗಣಪತಿ ಸೇರಿದಂತೆ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳಿದ್ದರು.
ಈಚೆಗೆ ನಡೆದ ಲಾರಿ ಮಾಲಕರ ಮುಷ್ಕರ ಸಂದರ್ಭ ಅವರಿಗೆ ನೋಟಿಸ್ ಜಾರಿ ಮಾಡಿರುವ ಎಸ್ಪಿ ಡಾ. ಅರುಣ್ ಅವರನ್ನು ಕಾರ್ಕಳ ಶಾಸಕ ಸುನಿಲ್ ಕುಮಾರ್ ತರಾಟೆಗೆ ತೆಗೆದುಕೊಂಡರು. ನೋಟಿಸ್ ನೀಡಿರುವುದು ಸರಿಯಲ್ಲ ಎಂದು ಶಾಸಕ ಸುನಿಲ್ ಪ್ರತಿಪಾದಿಸಿದರೆ, ಕಾನೂನು ರೀತಿಯಲ್ಲಿ ಕ್ರಮ ಕೈಗೊಂಡಿರುವುದಾಗಿ ಎಸ್ಪಿ ಸ್ಪಷ್ಟನೆ ನೀಡಿದರು. ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಮಧ್ಯಪ್ರವೇಶಿಸಿದ ಸಚಿವೆ ಹೆಬ್ಬಾಳ್ಕರ್ ವಾಕ್ಸಮರಕ್ಕೆ ಅಂತ್ಯಹಾಡಿದರು.