.jpg)
Library: ಗ್ರಂಥಾಲಯ ಜ್ಞಾನದ ಭಂಡಾರ
Thursday, November 23, 2023
ಉಡುಪಿ, ನ.22 (ಲೋಕಬಂಧು ವಾರ್ತೆ): ಗ್ರಂಥಾಲಯ ಜ್ಞಾನದ ಭಂಡಾರ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಗ್ರಂಥಾಲಯದ ಸದ್ಬಳಕೆ ಮಾಡಿಕೊಳ್ಳುವುದರೊಂದಿಗೆ ಜ್ಞಾನದ ಭಂಡಾರ ಹೆಚ್ಚಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಹೇಳಿದರು.
ಬುಧವಾರ ಅಜ್ಜರಕಾಡು ವಿದ್ಯಾವಾಚಸ್ಪತಿ ಡಾ| ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ನಗರ ಕೇಂದ್ರ ಗ್ರಂಥಾಲಯದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಗರ ಕೇಂದ್ರ ಗ್ರಂಥಾಲಯ ಉಡುಪಿ ವತಿಯಿಂದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಅಂಗವಾಗಿ ಸಿಬ್ಬಂದಿ ಸೇವಾ ಪುರಸ್ಕಾರ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಹಾಗೂ ಉತ್ತಮ ಓದುಗ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ, ಗ್ರಂಥಾಲಯ ಪಿತಾಮಹ ಡಾ| ಎಸ್. ಆರ್ ರಂಗನಾಥನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ದೇಶ ಸುತ್ತು ಕೋಶ ಓದು ಎಂಬ ಡಾl ಶಿವರಾಮ ಕಾರಂತರ ಮಾತಿನಂತೆ, ಕೋಶ ಎಂದರೆ ಗ್ರಂಥಾಲಯ. ಇಲ್ಲಿ ಓದಿದಾಗ ಜ್ಞಾನ ವಿಸ್ತಾರವಾಗುತ್ತದೆ. ಹಾಗೆಯೇ ದೇಶ ಸುತ್ತುವುದರಿಂದ ಪ್ರತಿಯೊಬ್ಬರ ಜೀವನ ಶೈಲಿಯನ್ನು ಅರ್ಥೈಸಿಕೊಳ್ಳಬಹುದಾಗಿದೆ ಎಂದರು.
ಜಿಲ್ಲೆಯಲ್ಲಿ ಅತ್ಯುತ್ತಮ ಶೈಲಿಯಲ್ಲಿ ಸುಸಜ್ಜಿತ ಮೂಲಭೂತ ಸೌಕರ್ಯಗಳನ್ನೊಳಗೊಂಡ ಗ್ರಂಥಾಲಯ ಕಟ್ಟಡ ನಿರ್ಮಿಸಲಾಗಿದ್ದು, ಇಲ್ಲಿ ಸಾಕಷ್ಟು ಅತ್ಯುತ್ತಮ ಪುಸ್ತಕಗಳ ಸಂಗ್ರಹಣೆ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರಿಗೆ ಹಾಗೂ ಓದುಗರಿಗೆ ಉತ್ತಮ ಪರಿಸರ ಇದೆ.
ಎಲ್ಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಂಥಾಲಯಗಳಲ್ಲಿಯೂ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಅದರಲ್ಲಿಯೂ ಸಕ್ರಿಯವಾಗಿ ಭಾಗವಹಿಸುವಂತೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ನಗರಸಭಾ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್, ಮಕ್ಕಳು ಸಕಾರಾತ್ಮಕವಾಗಿ ಯೋಚನೆ ಮಾಡಬೇಕು. ಅದರಿಂದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳ ಜೊತೆಗೆ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಶಾಲೆಯಲ್ಲಿರುವ ಗ್ರಂಥಾಲಯಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದರು.
ಸೃಜನಶೀಲ ಬರಹಗಾರ ಜೆ. ಪಿ ರಾವ್, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಗ್ರಂಥಾಲಯಗಳ ಪಾತ್ರ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಸಿಬ್ಬಂದಿ ಜಗದೀಶ್ ಭಟ್ ಕೆ., ಗ್ರಂಥಾಲಯದ ಉತ್ತಮ ಸಿಬ್ಬಂದಿ ಸೇವಾ ಪುರಸ್ಕಾರಕ್ಕೆ ಆಯ್ಕೆಯಾದ ಸುಲೇಖಾ ದಯಾನಂದ್, ಅಹಲ್ಯಾ ಅಮೀನ್ ಮತ್ತು ಪ್ರಭಾ, ಅತೀ ಹೆಚ್ಚು ಸದಸ್ಯತ್ವ ನೋಂದಣಿ ಮಾಡಿದ ಆಶಾ ಮತ್ತು ಅನಸೂಯ, ಉತ್ತಮ ಓದುಗ ಪ್ರಶಸ್ತಿಗೆ ಆಯ್ಕೆಯಾದ ಶ್ರೀಮತಿ ದೇವಿ ಮತ್ತು ಲಕ್ಷ್ಮೀಶ ಉಪಾಧ್ಯಾಯ ಅವರನ್ನು ಸನ್ಮಾನಿಸಲಾಯಿತು.
ಗ್ರಂಥಾಲಯ ಸಪ್ತಾಹ ಅಂಗವಾಗಿ ಶಾಲಾ ಮಕ್ಕಳಿಗೆ ಚಿತ್ರಕಲೆ, ಕನ್ನಡ ಪುಸ್ತಕ ಓದಿ ವಿಷಯ ತಿಳಿಸುವ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಸಾರ್ವಜನಿಕ ಮಕ್ಕಳಿಗೆ ಪಾಸಿಂಗ್ ದಿ ಬಾಲ್, ಸಂಗೀತ ಕುರ್ಚಿ ಹಾಗೂ ಚಿತ್ರಕಲಾ ಸ್ಪರ್ಧೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದ್ದು, ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ, ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಭಾಸ್ಕರ್ ಶೆಟ್ಟಿ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮೊದಲಾದವರಿದ್ದರು.
ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜೆ.ಐ ಸ್ವಾಗತಿಸಿದರು. ರಂಜಿತ ಸಿ. ನಿರೂಪಿಸಿ, ಸುನೀತ ಬಿ.ಎಸ್. ವಂದಿಸಿದರು.