.jpg)
Laxmi Hebbalkar: ನೂರ್ ಮೊಹಮ್ಮದ್ ಗೆ ಸಚಿವೆ ಹೆಬ್ಬಾಳ್ಕರ್ ಸಾಂತ್ವನ
Friday, November 17, 2023
ಉಡುಪಿ, ನ.17 (ಲೋಕಬಂಧು ವಾರ್ತೆ): ನೇಜಾರಿನಲ್ಲಿ ಕಳೆದ ಭಾನುವಾರ ಭೀಕರ ಹತ್ಯೆ ನಡೆದ ಮನೆಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶುಕ್ರವಾರ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಮೃತ ಹಸೀನಾ ಪತಿ ನೂರ್ ಮೊಹಮ್ಮದ್ ಮತ್ತವರ ಮಗ ಆಸಾದ್ ಹಾಗೂ ಕುಟುಂಬದ ಇತರ ಸದಸ್ಯರನ್ನು ಸಚಿವೆ ಭೇಟಿಯಾದರು.
ಮೃತ ಹಸೀನಾ ಪತಿ ನೂರ್ ಮೊಹಮ್ಮದ್ ಮತ್ತವರ ಮಗ ಆಸಾದ್ ಹಾಗೂ ಕುಟುಂಬದ ಇತರ ಸದಸ್ಯರನ್ನು ಸಚಿವೆ ಭೇಟಿಯಾದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಹೆಬ್ಬಾಳ್ಕರ್, ಉಡುಪಿಯನ್ನೇ ಬೆಚ್ಚಿಬೀಳಿಸುವ ಘಟನೆಯಲ್ಲಿ ಆರೋಪಿ, ಕುಟುಂಬದ ನಾಲ್ವರನ್ನು ಅಮಾನುಷವಾಗಿ ಕೊಂದು ರಾಕ್ಷಸೀ ಕೃತ್ಯ ಎಸಗಿದ್ದಾನೆ. ಆರೋಪಿಯನ್ನು ಕ್ಷಿಪ್ರವಾಗಿ ಬಂಧಿಸುವ ಮೂಲಕ ಪೊಲೀಸ್ ಇಲಾಖೆ ಉತ್ತಮ ಕೆಲಸ ಮಾಡಿದೆ. ನೊಂದ ಕುಟುಂಬಕ್ಕೆ ಆದಷ್ಟು ಬೇಗ ನ್ಯಾಯ ದೊರಕಿಸಲು ಪ್ರಯತ್ನಪಡುತ್ತೇವೆ ಎಂದರು.
ಉಡುಪಿ ಜಿಲ್ಲೆ ಶಾಂತಿ ಪ್ರಿಯರ ಜಿಲ್ಲೆ. ಇಂಥ ಜಿಲ್ಲೆಯಲ್ಲಿ ಹೀಗಾಗಬಾರದಿತ್ತು, ಆದರೂ ಆಗಿದೆ. ಮುಂದೆ ಇಂಥ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತೇವೆ. ಕಾನೂನು ಸುವ್ಯವಸ್ಥೆ ಕಾಪಾಡುತ್ತೇವೆ.
ಆರೋಪಿ ಬೆಳಗಾವಿಯಲ್ಲಿದ್ದ ಮಾಹಿತಿ ಯಾರಿಗೂ ಇರಲಿಲ್ಲ. ಆರೋಪಿ ಸೈಕೋ ರೀತಿಯಲ್ಲಿ ವರ್ತಿಸಿದ್ದಾನೆ. ಈಗಾಗಲೇ ಆತ ಮದುವೆಯಾಗಿದ್ದಾನೆ. 20 ನಿಮಿಷದಲ್ಲಿ ಕೃತ್ಯ ನಡೆಸಿದ ಆತನ ಮೆಂಟಲ್ ಸ್ಟೇಟಸ್ ಯಾವ ರೀತಿ ಇರಬಹುದು ಎಂದು ಊಹಿಸಲು ಸಾಧ್ಯವಿಲ್ಲ ಎಂದರು.
ಕುಟುಂಬದ ಸದಸ್ಯರು ಫಾಸ್ಟ್ ಟ್ರಾಕ್ ನ್ಯಾಯಾಲಯದ ಮೂಲಕ ತನಿಖೆಗೆ ಒತ್ತಾಯಿಸಿದ್ದಾರೆ. ಮನೆಯವರು ಹೇಳಿದ ವ್ಯಕ್ತಿಯೊಬ್ಬರ ಮೂಲಕ ತನಿಖೆ ಮಾಡುತ್ತೇವೆ. ತಾನು ಬೆಳಗಾವಿಯಲ್ಲಿದ್ದ ಕಾರಣ ಉಡುಪಿಗೆ ಬರಲು ವಿಳಂಬವಾಗಿದೆ. ಆದರೂ ನಾನು ಕುಟುಂಬ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಗೋಪಾಲ ಪೂಜಾರಿ, ನಾಯಕರಾದ ಪ್ರಸಾದ್ ರಾಜ್ ಕಾಂಚನ್, ದೀನೇಶ್ ಹೆಗ್ಡೆ, ರಮೇಶ್ ಕಾಂಚನ್, ಪ್ರಖ್ಯಾತ್ ಶೆಟ್ಟಿ, ಎಂ. ಎ. ಗಫೂರ್, ಸರಳಾ ಕಾಂಚನ್, ಡಾ. ಸುನೀತಾ ಶೆಟ್ಟಿ, ಜಿಲ್ಲಾಧಿಕಾರಿ ಡಾ| ವಿದ್ಯಾಕುಮಾರಿ, ಜಿಪಂ ಸಿಇಒ ಪ್ರಸನ್ನ ಎಚ್., ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ಅರುಣ್ ಮೊದಲಾದವರಿದ್ದರು.