ದ್ವೈತ ಪಂಥದ ಪ್ರತಿಪಾದಕರೂ ಪ್ರಸಾರಕರೂ, ಹರಿದಾಸ ಪರಂಪರೆಯ ಪ್ರಮುಖರೂ ಆಗಿರುವ ಶ್ರೀಪಾದರಾಜರು ಅಥವಾ ಶ್ರೀಪಾದರಾಯರು ಚೆನ್ನಪಟ್ಟಣ ತಾಲೂಕಿನ ಅಬ್ಬೂರಿನಲ್ಲಿ ಕ್ರಿ.ಶ. 1389ರಲ್ಲಿ ಜನಿಸಿದರು.ಅವರ ಮೂಲ ಹೆಸರು ಲಕ್ಷ್ಮೀನಾರಾಯಣ. ತಂದೆ ಶೇಷಗಿರಿಯಪ್ಪ, ತಾಯಿ ಗಿರಿಯಮ್ಮ.
ಹರಿದಾಸ ಪರಂಪರೆಯಲ್ಲಿ ತನ್ನದೇ ಅದ ಛಾಪನ್ನು ಒತ್ತಿದ್ದ ಶ್ರೀವ್ಯಾಸರಾಯರು ಶ್ರೀಪಾದರಾಯರ ಪರಮ ಶಿಷ್ಯ.
ಯಾತ್ರೆ ಹೊರಟಿದ್ದ ಶ್ರೀರಂಗದ ಯತಿ ಶ್ರೀ ಸ್ವರ್ಣವರ್ಣ ತೀರ್ಥರು ಬಾಲಕ ಲಕ್ಷ್ಮೀನಾರಾಯಣನ ವಿಶ್ವಾಸಪೂರಿತ ಮಾತು ಕೃತಿಗಳಿಂದ ಆಕರ್ಷಿತರಾಗಿ ಆತನಲ್ಲಡಗಿರುವ ಅಪಾರ ಪ್ರತಿಭೆಯನ್ನು ಗ್ರಹಿಸಿ ಲಕ್ಷ್ಮೀನಾರಾಯಣನನ್ನು ತನ್ನ ವಿದ್ಯಾಶಿಷ್ಯನಾಗಿ ಸ್ವೀಕರಿಸಿ, ಸಂನ್ಯಾಸ ದೀಕ್ಷೆಯನ್ನೂ ನೀಡಿ ತನ್ನ ಸಂಪೂರ್ಣ ಜ್ಞಾನವನ್ನು ಧಾರೆಯೆರೆಯುತ್ತಾರೆ.
ಮಹಾ ಪಂಡಿತರೆನ್ನಿಸಿಕೊಂಡಿದ್ದ ಮಂತ್ರಾಲಯದ ಯತಿಗಳಾಗಿದ್ದ ಶ್ರೀ ವಿಬುಧೇಂದ್ರತೀರ್ಥರಲ್ಲಿ ಸಕಲ ವೇದ ಶಾಸ್ತ್ರಗಳನ್ನೂ ಅಧ್ಯಯನ ಮಾಡುವ ವಿಶೇಷ ಅವಕಾಶಗಳನ್ನು ಕಲ್ಪಿಸಿಕೊಟ್ಟರು.
ಶ್ರೀ ವಿಬುಧೇಂದ್ರತೀರ್ಥರ ಶಿಷ್ಯನಾಗಿ ತರ್ಕ, ನ್ಯಾಯಗಳಲ್ಲಿ ಪ್ರಬಲ ಪಂಡಿತರಾಗಿ ಶ್ರೀಪಾದರಾಯರು ಹೊರಹೊಮ್ಮಿದರು.
ಗುರುಗಳಾದ ವಿಬುಧೇಂದ್ರ ಯತಿಗಳೊಂದಿಗೆ ಸಂಚಾರದಲ್ಲಿರುವಾಗ ಉತ್ತರಾದಿಮಠದ ಶ್ರೀ ರಘುಮಾನ್ಯತೀರ್ಥರ ದರ್ಶನವಾಯಿತು.
ಅವರ ಆಚಾರ, ಆಧ್ಯಾತ್ಮಿಕ ತಿಳಿವು ಮತ್ತು ಪಾಂಡಿತ್ಯವನ್ನು ಮೆಚ್ಚಿ ರಘುಮಾನ್ಯರು ಲಕ್ಷ್ಮೀನಾರಾಯಣ ಮುನಿಗೆ ಶ್ರೀಪಾದರಾಜ ಎಂದು ನಾಮಕರಣ ಮಾಡಿದರು.
ಶ್ರೀಪಾದರಾಜರು ತಮ್ಮ ಅಪಾರ ಮಹಿಮೆ ಮತ್ತು ವಿದ್ವತ್ತುಗಳಿಂದ ತಮ್ಮ ತಾಯ್ನುಡಿಯಾದ ಕನ್ನಡದಲ್ಲಿ ನೂರಾರು ಕೀರ್ತನೆಗಳನ್ನು ರಚಿಸಿದರು.
ತಮ್ಮ ಕೀರ್ತನೆಗಳನ್ನು ಸಂಗೀತಬದ್ಧವಾಗಿ ರಚಿಸಿದರಲ್ಲದೆ, ತಾವೇ ಕಾಲಿಗೆ ಗೆಜ್ಜೆ ಕಟ್ಟಿಕೊಂಡು, ತಾಳ ಹಾಕುತ್ತಾ ನರ್ತನ ಮಾಡಿದರು.
ರಾಗ, ತಾಳ, ಲಯಗಳಿಂದ ತುಂಬಿದ ಶ್ರೀಪಾದರಾಜರ ಸಂಗೀತ ಕೃತಿಗಳು ಕನ್ನಡ ಭಾಷೆಗೆ ವಿಶೇಷ ಕೊಡುಗೆ.
ಶ್ರೀಪಾದರಾಜರಿಂದ ದಾಸಸಾಹಿತ್ಯದ ಅರುಣೋದಯ ಎಂದೇ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ದಾಖಲಾಗಿದೆ.
ಭಕ್ತಿ ಪ್ರಚಾರ ಮತ್ತು ಪ್ರಸಾರದಲ್ಲಿ ಶ್ರೀಪಾದರಾಜರ ದಾಸಪಂಥ ಕರ್ನಾಟಕದಲ್ಲಿ ಮಾತ್ರವಲ್ಲದೇ ದೇಶದಾದ್ಯಂತ ಅಗಾಧ ಪ್ರಭಾವ ಬೀರಿತು. ಅವರ ಕೃತಿಗಳು ದಾಸಸಾಹಿತ್ಯ ಎಂದೇ ಖ್ಯಾತವಾಗಿವೆ.
ಕನ್ನಡನಾಡಿನ ಪುರಂದರರು ತ್ಯಾಗರಾಜರಿಗಿಂತಲೂ ಪೂರ್ವಜರಾದ ಶ್ರೀ ಶ್ರೀಪಾದರಾಯರು ಕನ್ನಡದಲ್ಲಿ ದಾಸ ಕೀರ್ತನೆ ಮತ್ತು ದೇವರ ನಾಮಗಳನ್ನು ರಚಿಸಿ ತಾವೇ ಹಾಡುವ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳಗಿಸಿದರು. ಭಕ್ತಿಪಂಥಕ್ಕೆ ಸರಳ ಮಾರ್ಗ ಹುಟ್ಟುಹಾಕಿದರು.
ಅನೇಕ ಹರಿದಾಸರುಗಳಿಗೆ ಗುರುಗಳಾದ ಶ್ರೀಪಾದರಾಯರು ದಾಸ ಸಾಹಿತ್ಯದ ಪಿತಾಮಹ ಎಂದೇ ಪ್ರಖ್ಯಾತರು.