.jpg)
ಡೆಂಗ್ಯೂ ಬಗ್ಗೆ ನಿರ್ಲಕ್ಷ್ಯ ಬೇಡ
Friday, July 19, 2024
ಡೆಂಗ್ಯೂ ಬಗ್ಗೆ ನಿರ್ಲಕ್ಷ್ಯ ಬೇಡ
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಡೆಂಗ್ಯೂ ಅತ್ಯಂತ ದೊಡ್ಡ ಕಾಯಿಲೆ ಅಲ್ಲ. ಆದರೆ, ಡೆಂಗ್ಯೂ ಬಗ್ಗೆ ನಿರ್ಲಕ್ಷ ವಹಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಮನೆ, ಪರಿಸರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳ ಮೇಲೆ ವಿಶೇಷ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ, ಲಯನ್ಸ್ ಕ್ಲಬ್ ಉದ್ಯಾವರ ಸನ್ಶೈನ್, ರೋಟರಿ ಕ್ಲಬ್ ಉದ್ಯಾವರ ಮತ್ತು ಉದ್ಯಾವರ ಗ್ರಾಮ ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಡೆದ ಡೆಂಗ್ಯೂ ಜ್ವರ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೆಳಗ್ಗಿನ ಹೊತ್ತಿನಲ್ಲಿ ಕಚ್ಚುವ ಈಡಿಸ್ ಸೊಳ್ಳೆಗಳ ಮೂಲಕ ಡೆಂಗ್ಯೂ ಜ್ವರ ಹರಡುತ್ತಿದೆ. ಮನೆ ಪರಿಸರದಲ್ಲಿ ಚಿಪ್ಪು, ಚಹಾ ಲೋಟ ಸಹಿತ ವಿವಿಧ ಸ್ಥಳಗಳಲ್ಲಿ ನೀರು ನಿಂತರೆ ಸಮಸ್ಯೆ ಉದ್ಭವಿಸುತ್ತದೆ. ಮನೆ ಪರಿಸರದಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವುದು ಅತ್ಯಗತ್ಯ.
ಈ ಸಂದರ್ಭದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲವೊಂದು ಮನೆಗಳಿಗೆ ಭೇಟಿ ನೀಡಿ ಡೆಂಗ್ಯೂ ಜ್ವರ ಬಗ್ಗೆ ಮಾಹಿತಿ ಮತ್ತು ಜಾಗೃತಿ ನೀಡಲಾಯಿತು.
ಉಡುಪಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಈಶ್ವರ್ ಗಡಾದ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿರ್ವಹಣಾಧಿಕಾರಿ ಡಾ. ಪ್ರಶಾಂತ್ ಭಟ್, ಉಡುಪಿ ತಾಲೂಕು ತಹಶೀಲ್ದಾರ್ ಗುರುರಾಜ್, ಉದ್ಯಾವರ ಗ್ರಾ.ಪಂ. ಅಧ್ಯಕ್ಷೆ ಮಾಲತಿ, ಪಿಡಿಒ ರಮೇಶ್, ಪಶು ವೈದ್ಯಾಧಿಕಾರಿ ಡಾ. ಸಂದೀಪ್ ಶೆಟ್ಟಿ, ಉಡುಪಿ ಜಿಲ್ಲಾ ಕೀಟ ಶಾಸ್ತ್ರಜ್ಞೆ ಮುಕ್ತಾ ಆಚಾರ್, ಉಡುಪಿ ತಾಲೂಕು ಆರೋಗ್ಯ ಅಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಮೂಡಬೆಟ್ಟು ಆರೋಗ್ಯಾಧಿಕಾರಿ ಡಾ. ಶೈನಿ, ಲಯನ್ಸ್ ಇಂಟರ್ ನ್ಯಾಷನಲ್ ಫೌಂಡೇಶನ್ ಜಿಲ್ಲಾ ಸಂಯೋಜನಾಧಿಕಾರಿ ಹರಿಪ್ರಸಾದ್ ರೈ ಮೊದಲಾದವರಿದ್ದರು.
ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಅಧ್ಯಕ್ಷ ರೊನಾಲ್ಡ್ ರೆಬೆಲ್ಲೊ ಸ್ವಾಗತಿಸಿ, ರೋಟರಿ ಕ್ಲಬ್ ಉದ್ಯಾವರ ಅಧ್ಯಕ್ಷ ಜೀವನ್ ಡಿ'ಸೋಜಾ ವಂದಿಸಿದರು. ಸ್ಟೀವನ್ ಕುಲಾಸೊ ಉದ್ಯಾವರ ನಿರೂಪಿಸಿದರು.