ಆರ್ಥಿಕ ಶಿಸ್ತಿನ ಬಜೆಟ್
Wednesday, July 24, 2024
ಆರ್ಥಿಕ ಶಿಸ್ತಿನ ಬಜೆಟ್
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಈ ಬಾರಿಯ ಬಜೆಟ್ ಆರ್ಥಿಕ ಶಿಸ್ತಿನ ಬಜೆಟ್ ಎಂದು ಭಾರತೀಯ ಲೆಕ್ಕಪರಿಶೋಧಕರ ಸಂಘದ ಉಡುಪಿ ಶಾಖೆ ಮಾಜಿ ಅಧ್ಯಕ್ಷ ಸಿಎ ನರಸಿಂಹ ನಾಯಕ್ ವಿಶ್ಲೇಷಿಸಿದ್ದಾರೆ.
ನೈಸರ್ಗಿಕ ಕೃಷಿಗೆ ಆದ್ಯತೆ, ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ ಅನುದಾನ ಮೀಸಲಿಡಲಾಗಿದೆ.
ಗ್ರಾಮೀಣಾಭಿವೃದ್ಧಿ, ಉದ್ಯೋಗ ಕೌಶಲ್ಯ ಅಭಿವೃದ್ಧಿ, ಮೂಲಭೂತ ಸೌಕರ್ಯ, ಶಿಕ್ಷಣ ಮತ್ತು ಆರೋಗ್ಯ, ತಂತ್ರಜ್ಞಾನ, ಕಾರ್ಮಿಕರು ಮತ್ತು ಮಹಿಳಾ ಸಬಲೀಕರಣಕ್ಕೆ ವಿಶೇಷ ಒತ್ತುನೀಡಲಾಗಿದೆ.
ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಸಂಶೋಧನೆ, ಆವಿಷ್ಕಾರಗಳು ಮತ್ತು ಅಭಿವೃದ್ಧಿ ಉದ್ದೇಶಗಳನ್ನು ಹೊಂದಿ ಮುಂದಿನ ಪೀಳಿಗೆಯ ಸುಧಾರಣೆಗೆ ಹೆಚ್ಚಿನ ಗಮನ ನೀಡಲಾಗಿದೆ.
48.20 ಲಕ್ಷ ಕೋಟಿ ಗಾತ್ರದ ಬಜೆಟ್‌ನಲ್ಲಿ ಬಂಡವಾಳ ವೆಚ್ಚಕ್ಕೆ 15.01 ಲಕ್ಷ ಕೋಟಿ ಮೀಸಲಿಟ್ಟಿದ್ದು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಮುದ್ರಾ ಸಾಲ ಯೋಜನೆ ಮಿತಿಯನ್ನು 10 ಲಕ್ಷದಿಂದ 20 ಲಕ್ಷಕ್ಕೆ ಏರಿಸಲಾಗಿದೆ. ಪರೋಕ್ಷ ತೆರಿಗೆಯಲ್ಲಿ ಮೀನುಗಾರಿಕೆ ಕ್ಷೇತ್ರಕ್ಕೆ ಹೆಚ್ಚಿನ ಬಂಪರ್ ನೀಡಿದ್ದು ಮೀನು ಸಂಸ್ಕರಣ ಯಂತ್ರೋಪಕರಣಗಳಿಗೆ ಕಸ್ಟಮ್ಸ್ ಇಳಿಕೆ ಮಾಡಲಾಗಿದೆ.
ಆದಾಯ ತೆರಿಗೆಯ ಸ್ಲ್ಯಾಬ್ ಗಳನ್ನು ಬದಲಾವಣೆ ಮಾಡಲಾಗಿದೆ. ಸ್ಟಾಂಡರ್ಡ್ ಡಿಡಕ್ಷನ್ ನ್ನು 50ರಿಂದ 75 ಸಾವಿರಕ್ಕೆ ಏರಿಸಿರುವುದರಿಂದ ವೇತನ ವರ್ಗದವರಿಗೆ ಉಳಿತಾಯವಾಗಲಿದೆ.
ಕುಟುಂಬ ಪಿಂಚಣಿ ಮೇಲಿನ ವಿನಾಯಿತಿ ಮಿತಿಯನ್ನು 15ರಿಂದ 25 ಸಾವಿರಕ್ಕೆ ಏರಿಸಲಾಗಿದೆ. ಟಿಡಿಎಸ್ ಸರಳಗೊಳಿಸಲಾಗಿದೆ.
ಬಹಿರಂಗಪಡಿಸದ ವಿದೇಶಿ ಆಸ್ತಿಗಳಿಗೆ 20 ಲಕ್ಷ ವರೆಗೆ ದಂಡ ಪಾವತಿಗೆ ವಿನಾಯಿತಿ ನೀಡಲಾಗಿದೆ.
ಈ ಬಜೆಟ್‌ನ ಪರಿಣಾಮಕಾರಿ ಅನುಷ್ಠಾನದಿಂದ ದೇಶದ ಪ್ರಗತಿ ಮತ್ತು ವಿಕಸಿತ ಭಾರತದ ಗುರಿ ತಲುಪಲು ಸಾಧ್ಯ ಎಂದು ನಾಯಕ್ ತಿಳಿಸಿದ್ದಾರೆ.