ಬಿಎಸ್ಎನ್ಎಲ್ ಸಮಸ್ಯೆ ಬಗೆಹರಿಸಲು ಸೂಚನೆ
Wednesday, July 17, 2024
ಬಿಎಸ್ಎನ್ಎಲ್ ಸಮಸ್ಯೆ ಬಗೆಹರಿಸಲು ಸೂಚನೆ
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಜಿಲ್ಲೆಯ ಗ್ರಾಮೀಣ ಭಾಗದ ಬಿಎಸ್ಎನ್ಎಲ್ ನೆಟ್ ವರ್ಕ್ ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕು ಮತ್ತು ಕಡಿಯಾಳಿಯಲ್ಲಿ ಖಾಲಿ ಇರುವ ಬಿಎಸ್ಎನ್ಎಲ್ ಕಟ್ಟಡವನ್ನು ಕೌಶಲ ಕೇಂದ್ರವಾಗಿ ಪರಿವರ್ತಿಸಲು ಯೋಚಿಸುವಂತೆ ಬಿಎಸ್ಎನ್ಎಲ್ ಅಧಿಕಾರಿಗಳಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಿಎಸ್ಎನ್ಎಲ್ ಅಧಿಕಾರಿಗಳ ಸಭೆ ನಡೆಸಿ, 196 ಟವರ್ ಗಳು ಕಾರ್ಯನಿರ್ವಹಿಸುತ್ತಿದ್ದರೂ ಅನೇಕ ಕಡೆಗಳಲ್ಲಿ ಸಮಸ್ಯೆಯಿದೆ.
ಗ್ರಾಹಕರಿಗೆ 4ಜಿ, 5ಜಿ ಸೇವೆಯನ್ನು ಆದಷ್ಟು ಬೇಗ ನೀಡುವ ನಿಟ್ಟಿನಲ್ಲಿ ಯೋಚಿಸಬೇಕು ಎಂದರು.
ಜಿಲ್ಲೆಯ ವಂಡ್ಸೆ, ಕೊಡ್ಲಾಡಿ, ಕೆರಾಡಿ ಹಾಗೂ ಯಳಜಿತ್ ನಲ್ಲಿ ತಹಶೀಲ್ದಾರ್ ಮೂಲಕ ನಿವೇಶನ ಪಡೆದು ಟವರ್ ನಿರ್ಮಾಣ ಕಾಮಗಾರಿ ಆರಂಭಿಸಬೇಕು.
ಸಿದ್ದಾಪುರ ಹಾಗೂ ನಾಡ್ಪಾಲಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಂಡು ಟವರ್ ನಿರ್ಮಾಣ ಮಾಡಬೇಕು.
ನಿರ್ಮಾಣ ಹಂತದಲ್ಲಿರುವ 41ಟವರ್ ಗಳ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.
ಗ್ರಾಮೀಣ ಭಾಗದಲ್ಲಿ ಟವರ್ ನಿರ್ವಹಣೆಗೆ ಸಿಬಂದಿ ಕೊರತೆ ಇರುವುದರಿಂದ ಗ್ರಾ.ಪಂ. ಮೂಲಕ ಟವರ್ ನಿರ್ವಹಣೆ ಯೋಚನೆ ನಡೆಸಬಹುದು ಎಂಬ ಸಲಹೆ ನೀಡಿದರು.
ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹಾಗೂ ಬಿಎಸ್ಎನ್ಎಲ್ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.