
ಕೃಷಿ ಡಿಪ್ಲೋಮ ಜೊತೆಗೆ ಕೃಷಿ ಕಾಲೇಜು ಆರಂಭಿಸಿ
Wednesday, July 17, 2024
ಕೃಷಿ ಡಿಪ್ಲೋಮ ಜೊತೆಗೆ ಕೃಷಿ ಕಾಲೇಜು ಆರಂಭಿಸಿ
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ಸ್ಥಳೀಯ ಜನತೆಯ ತೀವ್ರ ಬೇಡಿಕೆಯಾಗಿದ್ದ ಕೃಷಿ ಮಹಾವಿದ್ಯಾಲಯ ಆರಂಭಿಸುವ ಮನವಿಯನ್ನು ಪರಿಗಣಿಸದೆ ರಾಜ್ಯ ಸರ್ಕಾರ ಡಿಪ್ಲೋಮ ಪದವಿ ಪುನರಾರಂಭಿಸಲು ಆದೇಶ ನೀಡಿದ್ದು, ಸರಕಾರ ಈ ನಿರ್ಧಾರವನ್ನು ಪುನರ್ ಪರಿಶೀಲಿಸಿ ಮುಂದಿನ ಶೈಕ್ಷಣಿಕ ವರ್ಷದಿಂದ ಕೃಷಿ ಕಾಲೇಜು ಆರಂಭಿಸುವಂತೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಆಗ್ರಹಿಸಿದ್ದಾರೆ.
ಈಗಾಗಲೇ ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ಕರಾವಳಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಕೃಷಿ ವಿಭಾಗದಲ್ಲಿ ಪದವಿ ಶಿಕ್ಷಣಕ್ಕೆ ಅವಕಾಶ ಒದಗಿಸುವ ನಿಟ್ಟಿನಲ್ಲಿ ಕರಾವಳಿ ಕೃಷಿ ಕಾಲೇಜು ಹೋರಾಟ ಸಮಿತಿ, ಬಿಜೆಪಿ ರೈತ ಮೋರ್ಚಾ ಹಾಗೂ ವಿವಿಧ ಸಂಘಟನೆಗಳು ಹಲವು ಬಾರಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿವೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ಬ್ರಹ್ಮಾವರಕ್ಕೆ ಭೇಟಿ ನೀಡಿದ ಸಂದರ್ಭದಲ್ಲೂ ಕೃಷಿ ಕಾಲೇಜು ಆರಂಭಕ್ಕೆ ಮನವಿ ಮಾಡಿದ್ದೆ ಎಂದು ಶಾಸಕ ಯಶಪಾಲ್ ಸ್ಮರಿಸಿದ್ದಾರೆ.
2022ರಲ್ಲಿ ರಾಜ್ಯ ಸರ್ಕಾರ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಡಿಪ್ಲೋಮ ಕೋರ್ಸ್ ಗಳನ್ನು ಮುಂದುವರಿಸದಂತೆ ಆದೇಶ ನೀಡಿದೆ.
ಡಿಪ್ಲೋಮ ಕೋರ್ಸಿನ ಮಾನ್ಯತೆಯ ಗೊಂದಲ, ಉದ್ಯೋಗಾವಕಾಶ ಹಾಗೂ ಭವಿಷ್ಯದ ಅನಿಶ್ಚಿತತೆಯಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಡಿಪ್ಲೋಮ ಕೋರ್ಸಿಗೆ ಪ್ರವೇಶ ಪಡೆಯಲು ಅಸಕ್ತಿ ತೋರುತ್ತಿಲ್ಲ.
ರಾಜ್ಯ ಸರಕಾರ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ಕೃಷಿ ಕಾಲೇಜು ಆರಂಭಿಸಲು ಪೂರಕವಾಗಿರುವ 300 ಎಕ್ರೆ ಜಾಗದೊಂದಿಗೆ ಸುಸಜ್ಜಿತ ಕಟ್ಟಡ ಹಾಗೂ ಮೂಲ ಸೌಕರ್ಯ ಹೊಂದಿದ್ದು, ಸರ್ಕಾರಕ್ಕೆ ಯಾವುದೇ ಹೆಚ್ಚಿನ ಆರ್ಥಿಕ ಹೊರೆ ಇಲ್ಲದ ಕಾರಣ ಮುಂದಿನ ಶೈಕ್ಷಣಿಕ ವರ್ಷದಿಂದ ಕೃಷಿ ಕಾಲೇಜು ಆರಂಭಿಸಿ ಕರಾವಳಿ ಭಾಗದ ರೈತರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸುತ್ತಿರುವುದಾಗಿ ಶಾಸಕ ಯಶಪಾಲ್ ತಿಳಿಸಿದ್ದಾರೆ.