-->
ಪಹಣಿಯಲ್ಲಿ ವಕ್ಫ್ ವಿರೋಧಿಸಿ ನ.6ರಂದು ಪ್ರತಿಭಟನೆ

ಪಹಣಿಯಲ್ಲಿ ವಕ್ಫ್ ವಿರೋಧಿಸಿ ನ.6ರಂದು ಪ್ರತಿಭಟನೆ

ಲೋಕಬಂಧು ನ್ಯೂಸ್, ಉಡುಪಿ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಠ ಮಂದಿರಗಳು ಹಾಗೂ ರೈತರ ಕೃಷಿ ಭೂಮಿಯ ಪಹಣಿಯಲ್ಲಿ ವಕ್ಫ್ ಎಂದು ನಮೂದಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾದ್ಯಂತ ಹಿಂದೂಗಳು ಹಾಗೂ ರೈತರಿಗಾಗುತ್ತಿರುವ ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಜಿಲ್ಲೆಯಲ್ಲಿಯೂ ನ.6ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದರು.
ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಕಾಂಗ್ರೆಸ್ ಆಡಳಿತಕ್ಕೆ ಬಂದ ಲಾಗಾಯ್ತಿನಿಂದ ಬೆಲೆ ಏರಿಕೆ, ತುಷ್ಟೀಕರಣ, ಪಾಕ್ ಬೆಂಬಲಿತರಿಗೆ ಬೆಂಬಲ ಇತ್ಯಾದಿಗಳಿಂದಾಗಿ ರಾಜ್ಯದ ಜನತೆ ಭಯದ ವಾತಾವರಣದಲ್ಲಿದ್ದಾರೆ. ಅದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಮಠ ಮಂದಿರಗಳು ಹಾಗೂ ರೈತರ ಭೂಮಿಯನ್ನು ವಕ್ಫ್ ಗೆ ಸೇರ್ಪಡೆಗೊಳಿಸಿ ರೈತರಿಗೆ ನೋಟಿಸ್ ನೀಡುತ್ತಿರುವುದು ಅತ್ಯಂತ ಆಘಾತಕಾರಿ ಸಂಗತಿ.


ಮುಖ್ಯಮಂತ್ರಿ ಸಿದ್ಧರಾಮಯ್ಯ ಬೆಂಬಲದೊಂದಿಗೆ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಸಚಿವ ಜಮೀರ್ ಅಹಮ್ಮದ್ ಖುದ್ದು ಅಧಿಕಾರಿಗಳ ಮೂಲಕ ರೈತರ ಜಮೀನನ್ನು ವಕ್ಫ್ ಬೋರ್ಡ್ ಗೆ ಕಸಿದುಕೊಳ್ಳುತ್ತಿದ್ದಾರೆ. ಇದು ರಾಜ್ಯ ಸರಕಾರ ಹಿಂದೂಗಳಿಗೆ ಮಾಡುತ್ತಿರುವ ಘನಘೋರ ಅಪರಾಧ ಎಂದು ಕಿಶೋರ್ ಆಕ್ರೋಶ ವ್ಯಕ್ತಪಡಿಸಿದರು.


ನಾವ್ಯಾರೂ ಪ್ರತಿದಿನ ನಮ್ಮ ಜಾಗದ ಪಹಣಿಗಳನ್ನು ಪರಿಶೀಲಿಸುವುದಿಲ್ಲ. ಉಡುಪಿ ಜಿಲ್ಲೆಯ ಶಿವಳ್ಳಿ ಗ್ರಾಮವನ್ನೂ ಸುಲ್ತಾನಪುರ ಎಂದು ಪಹಣಿಯಲ್ಲಿ ನಮೂದಾಗಿರುವುದು ಕಂಡುಬಂದಿದೆ.


ಈ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನ.4 ಮತ್ತು 5ರಂದು ಜಿಲ್ಲೆಯ ಎಲ್ಲಾ ತಾಲೂಕು ಮಟ್ಟದಲ್ಲಿ ತಹಶೀಲ್ದಾರರಿಗೆ ಮನವಿ ನೀಡಲಾಗುವುದು. ನ. 6ರಂದು ಬೆಳಿಗ್ಗೆ 10 ಗಂಟೆಗೆ ಮಣಿಪಾಲ ಕಾಯಿನ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಕಾಲ್ನಡಿಗೆ ಮೆರವಣಿಗೆ ಮೂಲಕ ತೆರಳಿ, ಜಿಲ್ಲಾಧಿಕಾರಿಗೆ ಮನವಿ ನೀಡಲಾಗುವುದು.


ಬಿಜೆಪಿ ರಾಜಕೀಯ ಉದ್ದೇಶಕ್ಕಾಗಿ ಪ್ರತಿಭಟನೆ ಮಾಡುತ್ತಿಲ್ಲ. ಬದಲಾಗಿ ಜನರಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಂಡಿದ್ದು ಪಕ್ಷಾತೀತವಾಗಿ ರೈತರು, ದಲಿತರು, ಸಾರ್ವಜನಿಕರು ಸೇರಿದಂತೆ ಒಂದು ಸಾವಿರಕ್ಕೂ ಅಧಿಕ ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸುವರು.


ನ.5ರಂದು ಬೆಳಿಗ್ಗೆ 10 ಗಂಟೆಗೆ ಕಾರ್ಕಳ, ಅಪರಾಹ್ನ 3 ಗಂಟೆಗೆ ಕುಂದಾಪುರ ಮತ್ತು 4 ಗಂಟೆಗೆ ಹೆಬ್ರಿ, ನ.6ರಂದು ಅಪರಾಹ್ನ 3 ಗಂಟೆಗೆ ಕಾಪು ಮತ್ತು ಬೈಂದೂರುಗಳಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ನೀಡಲಾಗುವುದು.


ನ. 7 ಮತ್ತು 8ರಂದು ಜಿಲ್ಲೆಯಲ್ಲಿ ಪಹಣಿ ಪರಿಶೀಲನೆ ನಡೆಸಲಾಗುವುದು. ಒಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಂದೋಲನ ಮಾದರಿಯಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಕಿಶೋರ್ ತಿಳಿಸಿದರು.


ರೈತರಿಗೆ ನೋಟಿಸ್ ನೀಡಿರುವುದನ್ನು ಹಿಂಪಡೆಯುವಂತೆ ಅಧಿಕಾರಿಗಳಿಗೆ ಸಿಎಂ ನೀಡಿರುವ ಸೂಚನೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕಿಶೋರ್ ಕುಮಾರ್, ಇದು ಜನತೆಯ ಕಣ್ಣೀರೊರೆಸುವ ತಂತ್ರ. ಪಹಣಿ ಬದಲಾವಣೆ ಬಗೆಗಿನ ಮಾಧ್ಯಮ ವರದಿ ಮತ್ತು ಬಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ತಂತ್ರಗಾರಿಕೆ ಅನುಸರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.


ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹೆರ್ಗ ದಿನಕರ ಶೆಟ್ಟಿ ಮತ್ತು ರೇಶ್ಮಾ ಉದಯ ಶೆಟ್ಟಿ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ ಹಾಗೂ ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article