ಬಿಜೆಪಿ ಪ್ರತಿಭಟನೆ ರಾಜಕೀಯ ದುರುದ್ದೇಶಪೂರಿತ
Sunday, November 3, 2024
ಲೋಕಬಂಧು ನ್ಯೂಸ್, ಬೆಂಗಳೂರು
ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ರೈತರಿಗೆ ನೀಡಲಾಗಿರುವ ನೋಟಿಸ್ ಗಳನ್ನು ತಕ್ಷಣ ವಾಪಸ್ ಪಡೆಯಲು ಸರ್ಕಾರ ಸೂಚನೆ ನೀಡಿದ ನಂತರವೂ ಬಿಜೆಪಿ ನಾಯಕರು ಪ್ರತಿಭಟನೆಗೆ ಮುಂದಾಗಿರುವುದು ರಾಜಕೀಯ ಲಾಭದ ದುರುದ್ದೇಶವೇ ಹೊರತು ರೈತರ ಹಿತಾಸಕ್ತಿ ರಕ್ಷಣೆಯ ಯಾವ ಸದುದ್ದೇಶವೂ ಇಲ್ಲ ಎಂಬುದನ್ನು ರಾಜ್ಯದ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.ನ.3ರಂದು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಕ್ಫ್ ವಿಚಾರದಲ್ಲಿ ರೈತರಿಗೆ ನೀಡಲಾಗಿರುವ ನೋಟಿಸ್‌ಗಳನ್ನು ತಕ್ಷಣ ವಾಪಸ್ ಪಡೆಯಬೇಕು. ರೈತರ ಪಹಣಿ ಬದಲಾವಣೆ ಸಂಬಂಧ ಈಗಾಗಲೇ ನೀಡಿರುವ ನೋಟೀಸ್‌ಗಳನ್ನು ತಕ್ಷಣ ಹಿಂಪಡೆಯಬೇಕು. ಕಾನೂನು ಬಾಹಿರವಾಗಿ ಹಾಗೂ ನೋಟೀಸ್ ನೀಡದೆ ಪಹಣಿಯಲ್ಲಿ ಯಾವುದೇ ರೀತಿಯ ತಿದ್ದುಪಡಿ ಮಾಡಿದ್ದರೆ ತಕ್ಷಣ ರದ್ದು ಮಾಡಬೇಕು. ಅಧಿಕಾರಿಗಳು ಎಚ್ಚರ ವಹಿಸಿ, ರೈತರಿಗೆ ತೊಂದರೆಯಾಗುವ ಯಾವುದೇ ತೀರ್ಮಾನ ಕೈಗೊಳ್ಳಬಾರದು ಎಂದು ನಾನು ಸ್ಪಷ್ಟವಾಗಿ ಸೂಚನೆ ನೀಡಿದ್ದೇನೆ.
ಈ ಸೂಚನೆಯ ನಂತರವೂ ಬಿಜೆಪಿ ನಾಯಕರು ಯಾವ ಕಾರಣಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಸಿಎಂ ಪ್ರಶ್ನಿಸಿದ್ದಾರೆ.
ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಸ್ಲಿಂ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಾ ‘‘ವಕ್ಫ್ ಆಸ್ತಿ ಅಲ್ಲಾಹುಗೆ ಸೇರಿದ್ದು, ಆ ಆಸ್ತಿಯನ್ನು ಹಲವರು ಕಬಳಿಸಿದ್ದಾರೆ. ಅದನ್ನು ಒಂದೊಂದು ಇಂಚೂ ಬಿಡದೆ ವಾಪಸು ಪಡೆಯಬೇಕು, ಇಲ್ಲದೆ ಇದ್ದರೆ ಅಲ್ಲಾಹುವಿನ ದೃಷ್ಟಿಯಲ್ಲಿ ನೀವು ತಪ್ಪಿತಸ್ಥರಾಗುತ್ತಿರಿ’’ ಎಂದು ಹೇಳಿರುವ ವೀಡಿಯೊ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಇದು ಬಿಜೆಪಿ ನಾಯಕರ ಅತ್ಮವಂಚನೆಯ ನಡವಳಿಕೆಯನ್ನು ಬಯಲು ಮಾಡಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.