
ದಿಶಾಂಕ್ ಆ್ಯಪ್ ನಲ್ಲಿ ಉಡುಪಿಯ ಶಿವಳ್ಳಿ ಗ್ರಾಮ ಸುಲ್ತಾನಪುರ!
Sunday, November 3, 2024
ಲೋಕಬಂಧು ನ್ಯೂಸ್, ಉಡುಪಿ
ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದ ದಿನಕ್ಕೊಂದು ಆಯಾಮ ಪಡೆಯುತ್ತಿದ್ದು, ರಾಜ್ಯದ ಜನತೆ ತಮ್ಮ ಪಹಣಿ ಪರಶೀಲಿಸುವಂತೆ ಮಾಡಿದೆ.ಹಾಗೆ ಉಡುಪಿಯಲ್ಲಿಯೂ ಗ್ರಾಮಸ್ಥರು, ಕೃಷಿಕರು, ರೈತರು ತಮ್ಮ ಪಹಣಿ ಮತ್ತು ಸರ್ಕಾರಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಉಡುಪಿ ಜಿಲ್ಲೆಯ ಜನರು ದಾಖಲೆಗಳನ್ನು ತಡಕಾಡುವ ವೇಳೆ ಉಡುಪಿಯ ಗ್ರಾಮವೊಂದರ ಹೆಸರು ಸುಲ್ತಾನಪುರ ಎಂದು ಬದಲಾಗಿರುವುದು ಕಂಡು ಬೆಚ್ಚಿಬಿದ್ದಿದ್ದಾರೆ!
ಜಿಲ್ಲೆಯ ಮಣಿಪಾಲ ಸಮೀಪದ ಶಿವಳ್ಳಿ ಗ್ರಾಮದಲ್ಲಿ ಸುಲ್ತಾನಪುರ ಎಂಬ ಅಪರಿಚಿತ ಊರಿನ ಹೆಸರು ಪಹಣಿಯಲ್ಲಿ ನಮೂದಾಗಿದೆ.
ಉಡುಪಿಗೆ ಹೆಸರು ಬಂದಿರುವುದೇ ಶಿವಳ್ಳಿ (ಶಿವಬೆಳ್ಳಿ) ಮೂಲಕ. ಶಿವಳ್ಳಿ ಎಂಬುದು ಉಡುಪಿಯ ಮೂಲ ಹೆಸರು. ಅದು ಹೊರತುಪಡಿಸಿ ಉಡುಪಿಯ ಯಾವ ಇತಿಹಾಸದಲ್ಲೂ ಸುಲ್ತಾನಪುರ ಎಂಬ ಹೆಸರೇ ಇಲ್ಲ. ಆದರೂ ರಾಜ್ಯ ಸರ್ಕಾರದ ದಿಶಾಂಕ್ ಆ್ಯಪ್ ನಲ್ಲಿ `ಸುಲ್ತಾನಪುರ' ಎಂಬ ಹೆಸರು ನಮೂದಾಗಿದೆ!
ಇಲ್ಲದೇ ಇರುವ ನೂತನ ಹೆಸರು ಆ್ಯಪ್ ನಲ್ಲಿ ಹೇಗೆ ಕಾಣಿಸಿಕೊಳ್ಳುತ್ತಿದೆ? ಇದು ಉದ್ದೇಶಪೂರ್ವಕವಾಗಿ ಕಾಣದ ಕೈಗಳು ಮಾಡಿರುವ ಷಡ್ಯಂತ್ರವೇ ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುವಂತಾಗಿದೆ.
ಶಿವಳ್ಳಿ ಗ್ರಾಮದ ಸರ್ವೇ ನಂಬರ್ ಪರಿಶೀಲನೆ ವೇಳೆ ಸುಲ್ತಾನಪುರ ಹೆಸರು ಪತ್ತೆಯಾಗಿದೆ. ವಾಸ್ತವವಾಗಿ ಶಿವಳ್ಳಿಯಲ್ಲಾಗಲಿ, ಸುತ್ತಮುತ್ತಲಿನ ಪರಿಸರದಲ್ಲಾಗಲಿ ಆ ಹೆಸರಿನ ಊರೇ ಇಲ್ಲ. ಈ ಆ್ಯಪ್ ನಲ್ಲಿ ಸುಲ್ತಾನಪುರ ಹೆಸರಿದೆ. ಅಷ್ಟೇ ಅಲ್ಲ, ಊರಿಗೆ ಸಂಬಂಧವೇ ಇಲ್ಲದ ಸಾಲು ಸಾಲು ಹೆಸರುಗಳಿವೆ. ಮುದ್ದತ್ತನೂರು, ಸೋಟ್ನಟ್ಟಿ, ಪೇಪ್ನೋಲ್ಲಿ, ಮಿಕ್ಕಿರೆ, ಸರ್ಕೂರು ಇವೆಲ್ಲ ಯಾರು ಕೇಳಿದ ಹೆಸರುಗಳು? ಎಲ್ಲಿಂದ ಬಂದವು ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ದಿಶಾಂಕ್ ಆ್ಯಪ್ ನ್ನು ಸರ್ವೇ ನಂಬರ್ ಗಳನ್ನು ಗುರುತಿಸಲು ಸಿದ್ಧಪಡಿಸಲಾಗಿದೆ. ಇದು ಆರ್.ಟಿ.ಸಿ ಪರಿಶೀಲಿಸುವ ಆ್ಯಪ್ ಅಲ್ಲ.
ಸ್ಥಳದ ಹೆಸರು ನಮೂದಿಸುವ ವೇಳೆ ತಪ್ಪಾಗಿರುವ ಸಾಧ್ಯತೆಯಿದೆ. ಈ ಆ್ಯಪ್ ನಲ್ಲಿ ಇಂಥ ಅನೇಕ ತಪ್ಪುಗಳು ಕಂಡುಬಂದಿದ್ದು, ಖಾಸಗಿಯವರ ನೆರವಿನೊಂದಿಗೆ ದಾಖಲೆಗಳು ಅಪ್ಲೋಡ್ ಆಗಿರುವ ಸಾಧ್ಯತೆ ಇದ್ದು, ಆ ಬಗ್ಗೆ ಪರಿಶೀಲನೆ ನಡೆಸಿ ಜಿಲ್ಲಾಡಳಿತ ಸ್ಪಷ್ಟನೆ ನೀಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.