
ಪಿಯುಸಿ ಪರೀಕ್ಷೆ: ಉಡುಪಿಯಲ್ಲಿ 16,203 ಪರೀಕ್ಷಾರ್ಥಿಗಳು
Friday, February 28, 2025
ಲೋಕಬಂಧು ನ್ಯೂಸ್
ಉಡುಪಿ, ಫೆ.28: ಮಾರ್ಚ್1ರಿಂದ 20ರ ವರೆಗೆ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈ ಬಾರಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 16,203 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅವರಲ್ಲಿ 15,685 ಮಂದಿ ಹೊಸಬರು. 351 ಮಂದಿ ಖಾಸಗಿಯಾಗಿ, 163 ಜನ ಮರು ಪರೀಕ್ಷೆ ಹಾಗೂ 4 ಮಂದಿ ಫಲಿತಾಂಶ ಸುಧಾರಣೆಗಾಗಿ ಪರೀಕ್ಷೆ ಎದುರಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಗುಮವಾಗಿ ಪರೀಕ್ಷೆ ನಡೆಸಲು ಈಗಾಗಲೇ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
28 ಪರೀಕ್ಷಾ ಕೇಂದ್ರ
ಜಿಲ್ಲೆಯಲ್ಲಿ ಒಟ್ಟು 113 ಪಿಯು ಕಾಲೇಜುಗಳಿದ್ದು, 28 ಪರೀಕ್ಷಾ ಕೇಂದ್ರಗಳಿವೆ. ಪ್ರಶ್ನೆಪತ್ರಿಕೆ ಜಿಲ್ಲಾ ಖಜಾನೆಯಲ್ಲಿ ಭದ್ರವಾಗಿವೆ. ಜಿಪಿಎಸ್ ವಾಹನದ ಮೂಲಕ ಪರೀಕ್ಷಾ ಕೇಂದ್ರಕ್ಕೆ ಅಧಿಕಾರಿಗಳು ಕೊಂಡೊಯ್ಯಲಿದ್ದಾರೆ.
ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಪರೀಕ್ಷೆ ನಡೆಯಲಿದೆ. ತಾಲೂಕು ಮಟ್ಟದಲ್ಲಿ ಸ್ಕ್ವಾಡ್, ಜಿಲ್ಲಾ ಮಟ್ಟದ ಸ್ಕ್ವಾಡ್, ರಾಜ್ಯ ಮಟ್ಟದ ಸ್ಕ್ವಾಡ್ ಪರಿಶೀಲನೆ ನಡೆಸಲಿದೆ ಎಂದರು.
ಪರೀಕ್ಷೆಯಲ್ಲಿ ಕರ್ತವ್ಯ ನಿರ್ವಹಿಸುವ ಮುಖ್ಯಾಧೀಕ್ಷಕರು, ಉಪ ಅಧೀಕ್ಷಕರು, ವೀಕ್ಷಕರ ಸಭೆ ನಡೆಸಿ ವಿದ್ಯಾರ್ಥಿ ಸ್ನೇಹಿಯಾಗಿ ಪರೀಕ್ಷೆ ನಡೆಸಲು ಸೂಚಿಸಲಾಗಿದೆ.
ಎಲ್ಲಾ ಪರೀಕ್ಷಾ ಕೊಠಡಿಯಲ್ಲಿ ಗಡಿಯಾರ, ಕುಡಿಯುವ ನೀರು, ಸಿಸಿ ಟಿವಿ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾನಿಟರಿಂಗ್ ಸೆಂಟರ್ ಮೂಲಕ ಅಕ್ರಮ ನಡೆಯದಂತೆ ವೀಕ್ಷಿಸಲಾಗುತ್ತದೆ.
ವೀಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಪರೀಕ್ಷಾ ಕರ್ತವ್ಯದಲ್ಲಿರುವ ಯಾರಿಗೂ ಮೊಬೈಲ್ ಬಳಕೆಗೆ ಅವಕಾಶವಿಲ್ಲ. ಯಾವುದೇ ವಿದ್ಯಾರ್ಥಿ ಅಕ್ರಮ ನಡೆಸುವುದು ಕಂಡಬಂದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು.
ಡಿಡಿಪಿಯು ಮಾರುತಿ ಇದ್ದರು.