
ಮಣಿಪಾಲದಲ್ಲಿ ಬಂಜೆತನ ವಿಚಾರಸಂಕಿರಣ
Friday, February 28, 2025
ಲೋಕಬಂಧು ನ್ಯೂಸ್
ಉಡುಪಿ, ಫೆ.28: ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಪ್ರಜನನ ವಿಭಾಗ ಆಶ್ರಯದಲ್ಲಿ ಬಂಜೆತನ ಕುರಿತ ವಿಚಾರ ಸಂಕಿರಣ ನಡೆಯಲಿದೆ. ಅದರಲ್ಲಿ ಭಾರತ ಮತ್ತು ಜರ್ಮನ್ ದೇಶದ ತಲಾ 15 ಮಂದಿ ತಜ್ಞ ವೈದ್ಯರು ಭಾಗವಹಿಸುವರು ಎಂದು ಕೆಎಂಸಿ ಸಹ ಉಪಕುಲಾಧಿಪತಿ ಡಾ.ಶರತ್ ಕುಮಾರ್ ರಾವ್ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಇಂದು ವಿಚಾರ ಸಂಕಿರಣ ಆರಂಭಗೊಂಡಿದ್ದು, ಮಾ.1ರ ವರೆಗೆ ನಡೆಯಲಿದೆ.
ವಿಚಾರ ಸಂಕಿರಣದಲ್ಲಿ ಬಂಜೆತನ, ಅದರಲ್ಲೂ ಪುರುಷ ಬಂಜೆತನ, ಅದಕ್ಕೆ ಕಾರಣ ಮತ್ತು ಪರಿಹಾರೋಪಾಯಗಳ ಬಗ್ಗೆ ವಿಚಾರ ವಿನಿಮಯ ನಡೆಯಲಿದೆ.
ಇತ್ತೀಚಿನ ದಿನಗಳಲ್ಲಿ ಬಂಜೆತನ ಸಾಮಾನ್ಯವಾಗಿದ್ದು, ನವ ವಿವಾಹಿತರಲ್ಲಿ ಶೇ.20ಕ್ಕಿಂತ ಅಧಿಕವಾಗಿದೆ. ಆಹಾರ ಕ್ರಮ, ಜೀವನ ಪದ್ಧತಿ, ಧೂಮಪಾನ- ಆಲ್ಕೋಹಾಲ್ ಸೇವನೆ ಇತ್ಯಾದಿ ಬಂಜೆತನಕ್ಕೆ ಕಾರಣವಾಗಿದೆ. ಜೊತೆಗೆ ಮೊಬೈಲ್, ಲ್ಯಾಪ್‌ಟಾಪ್ ಅತಿಬಳಕೆಯೂ ಕಾರಣ ಎಂಬ ಬಗ್ಗೆ ಸಂಶೋಧನೆ ನಡೆಯುತ್ತಿದೆ ಎಂದರು.
ಪ್ರಪಂಚದ ಬಹುತೇಕ ದೇಶಗಳಲ್ಲಿ ಪುರುಷರಲ್ಲಿ ವೀರ್ಯ ಉತ್ಪಾದನೆ ಕಡಿಮೆಯಾಗುತ್ತಿದೆ ಎಂಬ ವೈದ್ಯಕೀಯ ವರದಿ ಹಿನ್ನೆಲೆಯಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ ನಡೆಸಿದ ಸಂಶೋಧನೆ ಕರ್ನಾಟಕ ಮತ್ತು ಕೇರಳಗಳಲ್ಲಿ ಸುಳ್ಳಾಗಿಸಿದೆ ಎಂದು ಮಣಿಪಾಲ ಪ್ರಜನನ ವಿಭಾಗದ ಡಾ.ಪ್ರೊ. ಸತೀಶ ಅಡಿಗ ಹೇಳಿದರು.
ಜರ್ಮನಿಯ ವೈದ್ಯರಾದ ಡಾ.ಪ್ರೊ.ಸ್ಟೀಫನ್ ಸ್ಕ್ಲಾಟ್, ಡಾ.ಪ್ರೊ.ಆ್ಯಂಡ್ರೆಸ್ ಮೈನ್'ಹಾರ್ಡ್ಟ್ ಮತ್ತು ಡಾ.ಪ್ರೊ.ಕ್ಲೌಡಿಯಾ ಕ್ರಾಲ್'ಮ್ನ್ ಇದ್ದರು.