-->
ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಹಗರಣ ತನಿಖೆ ಪೂರ್ಣ

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಹಗರಣ ತನಿಖೆ ಪೂರ್ಣ

ಲೋಕಬಂಧು ನ್ಯೂಸ್
ಉಡುಪಿ, ಫೆ.28: ಅವಿಭಜಿತ ದ.ಕ. ಜಿಲ್ಲೆಯ ಸಹಕಾರಿ ರಂಗದ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ ಎನ್ನಲಾದ 14 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿ ಬ್ರಹ್ಮಾವರ ಸಿಪಿಐ ನೇತೃತ್ವದಲ್ಲಿ ಪೊಲೀಸ್ ತನಿಖೆ ಪೂರ್ಣಗೊಂಡಿದೆ. ದೋಷಾರೋಪಣೆ ಪಟ್ಟಿ ಸಲ್ಲಿಸಲು ಸರ್ಕಾರದ ಪೂರ್ವಾನುಮತಿ ಬೇಕಿತ್ತು. ಸಹಕಾರಿ ಸಚಿವರು ಸಹಿ ಹಾಕಿದ್ದು, ಒಂದೆರಡು ದಿನಗಳಲ್ಲಿ ಆದೇಶವಾಗಲಿದೆ ಎಂದು ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಹಗರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಹಿರಿಯ ಮುಖಂಡ ಪ್ರತಾಪಚಂದ್ರ ಶೆಟ್ಟಿ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ನಡೆಯುತ್ತಿರುವ ಬಗ್ಗೆ ಶುಕ್ರವಾರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.


ಸಹಕಾರಿ ಇಲಾಖೆಯ ಡೆಪ್ಯುಟಿ ರಿಜಿಸ್ಟರ್ ಅದರ ಎಂಡಿ ಆಗಿದ್ದರು. ಹಾಗಾಗಿ ಚಾರ್ಜ್ ಶೀಟ್ ಸಲ್ಲಿಸಲು ಸರಕಾರದ ಪೂರ್ವಾನುಮತಿ ಬೇಕಾಗುತ್ತದೆ. ಪೂರ್ವಾನುಮತಿಯ ಭಾಗವಾಗಿ ಈಗಾಗಲೇ ಸಹಕಾರಿ ಸಚಿವ ರಾಜಣ್ಣ ಕೂಡಾ ಸಹಿ ಮಾಡಿದ್ದಾರೆ. ಸದ್ಯ ಕಾರ್ಯದರ್ಶಿ ಅವರಿಂದ ಆದೇಶ ನಿರೀಕ್ಷಿಸಲಾಗುತ್ತಿದೆ ಎಂದರು.


ಆದೇಶ ಕೈಸೇರುತ್ತಿದ್ದಂತೆ ಬ್ರಹ್ಮಾವರ ಸಿಪಿಐ ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಈಗಾಗಲೇ ನ್ಯಾಯಾಂಗ ತನಿಖೆಗೂ ಆದೇಶ ಮಾಡಲಾಗಿದೆ. ಸರ್ಕಾರಿ ಅಧಿಕಾರಿಗಳಿರುವ ಕಾರಣ ಪೂರ್ವಾನುಮತಿ ಅಗತ್ಯ ಇತ್ತು. ಪ್ರತಾಪಚಂದ್ರ ಶೆಟ್ಟಿ ರೈತರ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ಇನ್ನು ಈ ಹಗರಣದ ತನಿಖೆ ವೇಗ ಪಡೆದುಕೊಳ್ಳಲಿದೆ ಎಂದರು.


ಡಿಕೆಶಿ ಸಾಫ್ಟ್ ಹಿಂದುತ್ವ ವಿಚಾರ
ಬಿಜೆಪಿಯವರು ಅವರ ಪಕ್ಷದ ವಿಚಾರ ನೋಡಿಕೊಂಡರೆ ಉತ್ತಮ. ಕಾಂಗ್ರೆಸ್‌ನಲ್ಲಿ ಆಗುತ್ತಿರುವ ಚರ್ಚೆ ಬಗ್ಗೆ ಅವರಿಗೆ ತಲೆ ಬಿಸಿ ಬೇಡ. ಬಿಜೆಪಿಯೊಳಗಿನ ಭಿನ್ನಾಭಿಪ್ರಾಯ ನೋಡಿಕೊಳ್ಳಲಿ ಎಂದು ಹೆಗ್ಡೆ ಹೇಳಿದರು.


ಕುಂಭಮೇಳಕ್ಕೆ ಹೋಗಿರುವುದು ವೈಯಕ್ತಿಕ ವಿಚಾರ ಎಂದು ಡಿಕೆ ಶಿವಕುಮಾರ್ ಅವರೇ ಹೇಳಿದ್ದಾರೆ. ಹೆಚ್ಚಿನ ವಿವರವನ್ನು ಡಿಕೆ ಶಿವಕುಮಾರ್ ಅವರಿಂದಲೇ ಕೇಳಿ, ಎಲ್ಲದಕ್ಕೂ ಉತ್ತರ ಕೊಡಲು ಡಿಕೆ ಶಿವಕುಮಾರ್ ಶಕ್ತರಿದ್ದಾರೆ. ಡಿಕೆ ಶಿವಕುಮಾರ್ ಮಾತ್ರ ಅಲ್ಲ, ತುಂಬಾ ಜನ ನಾಯಕರು ಕುಂಭಮೇಳಕ್ಕೆ ಹೋಗಿದ್ದಾರೆ.


ಕೆಪಿಸಿಸಿ ಅಧ್ಯಕ್ಷರಿಗೆ ನಾನು ಉತ್ತರ ಹೇಳಲು ಸಾಧ್ಯವಿಲ್ಲ, ಜನರಿಗೆ ಬೇಕಾದದ್ದು ಚರ್ಚೆ. ಆದರೆ, ಬಿಜೆಪಿಯವರು ಪ್ರಶ್ನೆ ಕೇಳುವುದು ಎಷ್ಟು ಸರಿ? ಅಲ್ಲಿಯೇ ಮೂರು ಗುಂಪು ಇದೆ, ಬಣಗಳಿವೆ. ಬಿಜೆಪಿಯವರಿಗೆ ನಿಜವಾಗಿಯೂ ಶಿವಕುಮಾರ್ ಮೇಲೆ ಪ್ರೀತಿ ಇಲ್ಲ. ರಾಜಕೀಯ ಲಾಭ ಸಿಗುತ್ತದೆಯೋ ಎಂದು ನೋಡಲು ಪ್ರಯತ್ನಿಸುತ್ತಿದ್ದಾರೆ ಎಂದರು.

Ads on article

Advertise in articles 1

advertising articles 2

Advertise under the article