-->
ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ

ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ

ಲೋಕಬಂಧು ನ್ಯೂಸ್
ಉಡುಪಿ, ಫೆ.28: ಬಿಜೆಪಿ ಸುಸಜ್ಜಿತ ತಂಡವನ್ನು ರೂಪಿಸಿದೆ. ಅದರಲ್ಲಿ ಭಿನ್ನಮತೀಯರು, ಅನ್ಯಮತೀಯರು ಯಾರೂ ಇಲ್ಲ. ನಮ್ಮದು ಬಿಜೆಪಿಯ ಒಂದು ತಂಡವಾಗಿದ್ದು, ಬೇರೆ ಬೇರೆಯವರಿಗೆ ಬೇರೆ ಬೇರೆ ಜವಾಬ್ದಾರಿ ಕೊಡುತ್ತಾರೆ ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ರಾಜ್ಯಾದ್ಯಂತ ತಂಡವಾಗಿ ಹೋರಾಟ ಮಾಡುತ್ತಿರುವ ಬಿಜೆಪಿ, ಯತ್ನಾಳ್ ಟೀಮ್ ಕೈಬಿಟ್ಟ ವಿಚಾರದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಶುಕ್ರವಾರ ಉತ್ತರಿಸಿದರು.


ಕೆಲವರಿಗೆ ಈ ಜವಾಬ್ದಾರಿ ಕೊಟ್ಟಿದ್ದಾರೆ. ನಾವು ಆ ಜವಾಬ್ದಾರಿ ನಿಭಾಯಿಸುತ್ತಿದ್ದೇವೆ. ಇಲ್ಲಿ ವ್ಯಕ್ತಿ ಮುಖ್ಯ ಅಲ್ಲ ಪಕ್ಷ ಮುಖ್ಯ, ಯತ್ನಾಳ್ ಕೂಡಾ ನಮ್ಮ ಪಕ್ಷದ ಮುಖಂಡರು. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ನಮ್ಮಲ್ಲಿ ಏನೂ ಸಮಸ್ಯೆ ಇಲ್ಲ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ಸರ್ಕಾರದ ವೈಫಲ್ಯ ಜನಮಾನಸದ ಮುಂದೆ ಇಡುತ್ತೇವೆ ಎಂದರು.


ಡಿಕೆಶಿ ಸಾಫ್ಟ್ ಹಿಂದುತ್ವ ವಿಚಾರ
ಇಶಾ ಫೌಂಡೇಶನ್ ನಲ್ಲಿ ಅಮಿತ್ ಶಾ ಜೊತೆ ಡಿಕೆಶಿ ಮಾತನಾಡಿದ್ದಾರೆ ಎನ್ನಲಾಗುತ್ತಿದೆ. ಅದೊಂದು ಧಾರ್ಮಿಕ ಕ್ಷೇತ್ರ. ಅಲ್ಲಿಗೆ ಡಿ.ಕೆ.ಶಿವಕುಮಾರ್ ಅವರನ್ನು ಕರೆದಿದ್ದಾರೆ. ಅದು ಧಾರ್ಮಿಕ ವಿಚಾರ ಅಷ್ಟೇ.


ಶ್ರೀಕೃಷ್ಣ ಭೀಷ್ಮನನ್ನು ನಡುರಾತ್ರಿಯಲ್ಲಿ ಹೋಗಿ ಭೇಟಿಯಾಗಿದ್ದನಂತೆ. ಕೆಲವೊಮ್ಮೆ ರಾಜಕೀಯದಲ್ಲೂ ಹೀಗೆಯೇ ಆಗುತ್ತದೆ. ನ್ಯಾಯಕ್ಕಾಗಿ ಕೃಷ್ಣ, ಭೀಷ್ಮನಲ್ಲಿ ಹೋಗಿದ್ದ ಮಹಾಭಾರತದ ಕಥೆಯನ್ನು ನೆನಪಿಸಿದರು.


ರಾಜಕಾರಣದಲ್ಲಿ ಅಂಥ ಚಟುವಟಿಕೆಗಳು ನಡೆಯುತ್ತಾ ಇರುತ್ತವೆ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಯಾರು ಕೂಡಾ ಶಾಶ್ವತ ಶತ್ರುಗಳು ಅಥವಾ ಮಿತ್ರರು ಇಲ್ಲ. ಇವತ್ತಿಗೂ ಆ ಪರಂಪರೆ ಊರ್ಜಿತದಲ್ಲಿದೆ. ದೊಡ್ಡವರು ಏನು ತೀರ್ಮಾನ ಮಾಡುತ್ತಾರೆ ಎನ್ನುವುದು ನಮಗೆ ಗೊತ್ತಿಲ್ಲ. ಒಳ್ಳೆಯ ವಾತಾವರಣದಲ್ಲಿ ಗಾಳಿ ಬೀಸುತ್ತಿದೆ ಎಂದು ಹೇಳಬಲ್ಲೆ ಎಂದರು.


ಕುಂಭಮೇಳದಲ್ಲಿ ಮುಳುಗಿದರೆ ಹೊಟ್ಟೆ ತುಂಬುತ್ತಾ ಎಂದು ಖರ್ಗೆ ಕೇಳಿದ್ದರು. ಆದರೆ, ಸಾವಿರ ಜನ ಸಾವಿರ ಹೇಳಲಿ ನಾನು ತೀರ್ಥ ಸ್ನಾನ ಮಾಡುತ್ತೇನೆ ಎಂದು ಡಿಕೆಶಿ ಮಾಡಿ ತೋರಿಸಿದ್ದಾರೆ. ನಾನೊಬ್ಬ ಹಿಂದೂ ಎಂದಿರುವ ಡಿಕೆಶಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.


ಹಿಂದುತ್ವಕ್ಕೆ ಗೌರವ ತೋರಿದ ಡಿಕೆಶಿ ಬಗ್ಗೆ ನಮಗೆ ಸಮಾಧಾನ ಇದೆ. ಇಶಾ ಫೌಂಡೇಶನ್ ಕಾರ್ಯಕ್ರಮಕ್ಕೆ ಸೀಮಿತ ಎಂಬುದು ನಮ್ಮ ಭಾವನೆ. ಅದನ್ನು ಮೀರಿ ಬಿಜೆಪಿ ಬಗ್ಗೆ ಯಾರೂ ಸಹಾನುಭೂತಿಯಿಂದ ಮಾತನಾಡಿದರೂ ಗೌರವದಿಂದ ಸ್ವೀಕರಿಸುತ್ತೇವೆ. ದೊಡ್ಡವರ ತೀರ್ಮಾನವೇ ನಮ್ಮ ತೀರ್ಮಾನ ಎಂದರು.

Ads on article

Advertise in articles 1

advertising articles 2

Advertise under the article