
ಮಾ.23: ಗೋವಿಂದ ಪೈ ಸಂಶೋಧನ ಸಂಪುಟ ಅನಾವರಣ
Friday, March 21, 2025
ಲೋಕಬಂಧು ನ್ಯೂಸ್
ಉಡುಪಿ: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ವತಿಯಿಂದ `ಗೋವಿಂದ ಪೈ ಸಂಶೋಧನ ಸಂಪುಟ'ದ ಪರಿಷ್ಕೃತ ದ್ವಿತೀಯ ಮುದ್ರಣ ಭಾಗ 2ರ ಅನಾವರಣ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಮಾರ್ಚ್ 23ರಂದು ಬೆಳಗ್ಗೆ 10 ಗಂಟೆಗೆ ಎಮ್.ಜಿ.ಎಮ್ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ ಎಂದು ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಗ್ರಂಥವನ್ನು ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಅನಾವರಣಗೊಳಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಹೆ ಕುಲಪತಿ ಲೆ.ಜ.ಡಾ.ಎಂ.ಡಿ ವೆಂಕಟೇಶ್, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಎಮ್.ಜಿ.ಎಮ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಉಪಸ್ಥಿತರಿರುವರು. ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಡಾ.ಬಿ.ಎ ವಿವೇಕ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಟಿ.ವಿ. ಮೋಹನದಾಸ್ ಪೈ ಪ್ರವರ್ತಿತ ವಿಮಲಾ ವಿ. ಪೈ ಪ್ರಾಯೋಜಿತ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಹಿರಿಯ ವಿದ್ವಾಂಸ ಮತ್ತು ಸಂಶೋಧಕ ನಾಡೋಜ ಡಾ.ಹಂ.ಪ. ನಾಗರಾಜಯ್ಯ ಅವರಿಗೆ ನೀಲಾಗುವುದು. ಮುಂಬಯಿ ವಿ.ವಿ. ಕನ್ನಡ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತ ಕುಮಾರ್ ಅಭಿನಂದನಾ ಭಾಷಣ ಮಾಡಲಿದ್ದಾರೆ ಎಂದರು.
ಕಾವ್ಯ, ನಾಟಕ ರಚನೆ, ವಿಮರ್ಶೆ ಹೀಗೆ ಸಾಹಿತ್ಯದ ಹತ್ತು ಹಲವು ಪ್ರಕಾರಗಳಲ್ಲಿ ತೊಡಗಿಕೊಂಡಿದ್ದ ಕರ್ನಾಟಕದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ನಾಡು ಕಂಡ ಅತ್ಯಂತ ಶ್ರೇಷ್ಠ ಸಂಶೋಧಕ.
ಶಬ್ದ, ಭಾಷೆ, ಸಾಹಿತ್ಯ, ಕಲೆ, ಇತಿಹಾಸ, ಸಂಸ್ಕೃತಿಯ ಮೇಲೆ ಅವರು ಹೇರಳವಾಗಿ ಅಧ್ಯಯನ ನಡೆಸಿ, ಲೇಖನಗಳನ್ನು ಬರೆದಿದ್ದಾರೆ. ಹಲವು ಭಾಷೆಗಳನ್ನು ಬಲ್ಲವರಾಗಿದ್ದ ಗೋವಿಂದ ಪೈ ಸಂಶೋಧನೆಗೆ ಅಂತರಶಿಸ್ತೀಯ ಆಯಾಮ ನೀಡಿದವರಾಗಿದ್ದರು.
ಅಂದು ದೊರಕಿದ ಸುಮಾರು ಸಾವಿರಕ್ಕೂ ಮಿಕ್ಕಿದ ಅವರ ಸಂಶೋಧನ ಲೇಖನಗಳನ್ನು ಸಂಗ್ರಹಿಸಿ 1995ರಲ್ಲಿ ಪ್ರೊ. ಹೆರಂಜೆ ಕೃಷ್ಣ ಭಟ್ ಹಾಗೂ ಪ್ರೊ. ಮುರಳೀಧರ ಉಪಾಧ್ಯ ಸಂಪಾದಕತ್ವದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ 1,400 ಪಟಗಳ ಸಮಗ್ರ ಗೋವಿಂದ ಪೈ ಸಂಶೋಧನ ಸಂಪುಟ ಪ್ರಕಟಿಸಿತ್ತು.
ಇಂದು ಹಾಗೂ ಮುಂದಿನ ಸಂಶೋಧನೆಗಳಿಗೂ ದಾರಿದೀಪದಂತಿರುವ ಈ ಕೃತಿಯಲ್ಲಿ ಹಳೆಗನ್ನಡ, ನಡುಗನ್ನಡ, ಹೊಸಗನ್ನಡ ಮಾತ್ರವಲ್ಲ ಕರ್ನಾಟಕ ಹಾಗೂ ಭಾರತದ ಚರಿತ್ರೆ, ತುಳುನಾಡಿನ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಹಲವಾರು ಲೇಖನಗಳಿವೆ.
ಬಹುಬೇಡಿಕೆಯ ಈ ಕೃತಿ ಈಗ ಮತ್ತೆ ಮರುಮುದ್ರಣ ಕಾಣುತ್ತಿದೆ. ನಂತರ ಸಿಕ್ಕಿದ ಒಂದಷ್ಟು ಲೇಖನಗಳು ಮರುಮುದ್ರಿತ ಕೃತಿಯಲ್ಲಿ ಜಾಗ ಪಡೆದಿವೆ. ಅಂದಿನ ಸಮಗ್ರ ಸಂಪುಟವನ್ನು ಇದೀಗ ಎರಡು ಸಂಪುಟಗಳಾಗಿ ಮಾಡಿಕೊಳ್ಳಲಾಗಿದೆ ಎಂದು ಕೃತಿ ಸಂಪಾದಕರಲ್ಲೋರ್ವರಾದ ಡಾ. ಪಾದೆಕಲ್ಲು ವಿಷ್ಣುಭಟ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೃತಿಯ ಸಂಪಾದಕ ಪ್ರೊ.ಮುರಳೀಧರ ಉಪಾಧ್ಯ, ಆರ್.ಆರ್.ಸಿ. ಸಹಸಂಶೋಧಕ ಡಾ. ಅರುಣ್ ಕುಮಾರ್ ಎಸ್.ಆರ್ ಇದ್ದರು.