ಲೋಕಬಂಧು ನ್ಯೂಸ್, ಉಡುಪಿ
ನಕಲಿ ದಾಖಲೆಗಳೊಂದಿಗೆ ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿದ್ದ 10 ಮಂದಿ ವಲಸಿಗರನ್ನು ಮಲ್ಪೆಯಲ್ಲಿ ಬಂಧಿಸಲಾಗಿದ್ದು, ಅಕ್ರಮ ವಲಸಿಗರಿಗೆ ಉಡುಪಿ ಜಿಲ್ಲಾ ನ್ಯಾಯಾಲಯ 2 ವರ್ಷಗಳ ಜೈಲು ಶಿಕ್ಷೆ ಮತ್ತು ತಲಾ 10 ಸಾವಿರ ರೂ ದಂಡ ವಿಧಿಸಿದೆ.
2024ರ ಅ. 11ರಂದು ಸಂಜೆ ಸುಮಾರು 7 ಗಂಟೆ ವೇಳೆಗೆ ಮಲ್ಪೆ ಪೊಲೀಸರು ಕರ್ತವ್ಯದಲ್ಲಿದ್ದ ವೇಳೆ ವಡಭಾಂಡೇಶ್ವರ ಬಸ್ ನಿಲ್ದಾಣ ಬಳಿ 7 ಮಂದಿ ಅನುಮಾನಾಸ್ಪದವಾಗಿ ಲಗೇಜುಗಳೊಂದಿಗೆ ಅಲೆಮಾರಿಗಳಂತೆ ಸುತ್ತಾಡುತ್ತಿರುವುದನ್ನು ಗಮನಿಸಿ, ವಿಚಾರಣೆ ನಡೆಸಿದಾಗ ಅವರು ಯಾವುದೇ ದಾಖಲೆಗಳಿಲ್ಲದೆ ನಕಲಿ ಆಧಾರ್ ಕಾರ್ಡ್'ಗಳನ್ನು ಸೃಷ್ಟಿಸಿ, ವಂಚನೆ ಮಾಡುವ ಉದ್ದೇಶದಿಂದ ಸುಳ್ಳು ಮಾಹಿತಿ ನೀಡಿ ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿರುವುದು ಬೆಳಕಿಗೆ ಬಂತು.
ಪೊಲೀಸ್ ತನಿಖೆ ವೇಳೆ ಉಳಿದ 3 ಮಂದಿ ಸಹಚರರನ್ನು ಪತ್ತೆಹಚ್ಚಿ ಬಂಧಿಸಲಾಗಿದ್ದು, ಒಟ್ಟು 10 ಮಂದಿ ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗರು ಪೊಲೀಸರ ವಶವಾಗಿದ್ದರು.
ಬಂಧಿತರನ್ನು ಹಕೀಮ್ ಆಲಿ, ಸುಜೋನ್ ಎಸ್.ಕೆ ಅಲಿಯಾಸ್ ಫಾರೂಕ್, ಇಸ್ಮಾಯಿಲ್ ಎಸ್.ಕೆ. ಅಲಿಯಾಸ್ ಮಹಮದ್ ಇಸ್ಮಾಯಿಲ್ ಹಾಕ್, ಕರೀಮ್ ಎಸ್.ಕೆ ಅಲಿಯಾಸ್ ಅಬ್ದುಲ್ ಕರೀಮ್, ಸಲಾಂ ಎಸ್.ಕೆ. ಅಲಿಯಾಸ್ ಎಮ್.ಡಿ. ಅಬ್ದುಲ್ ಅಜೀಜ್, ರಾಜಿಕುಲ್ ಎಸ್.ಕೆ, ಮೊಹಮ್ಮದ್ ಸೋಜಿಬ್ ಅಲಿಯಾಸ್ ಎಮ್.ಡಿ. ಅಲ್ಲಾಂ ಆಲಿ, ರಿಮೂಲ್ ಅಲಿಯಾಸ್ ಅಬ್ದುಲ್ ರೆಹಮಾನ್, ಮೊಹಮ್ಮದ್ ಇಮಾಮ್ ಶೇಖ್ ಮತ್ತು ಮೊಹಮ್ಮದ್ ಜಹಾಂಗಿರ್ ಆಲಂ ಎಂದು ಗುರುತಿಸಲಾಗಿತ್ತು.
ಆ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ನ್ಯಾಯಾಲಯದೆದುರು ಆರೋಪಿಗಳನ್ನು ಹಾಜರುಪಡಿಸಲಾಗಿತ್ತು.
ವಿಚಾರಣೆ ನಡೆಸಿದ ಉಡುಪಿ ಪ್ರಥಮ ದರ್ಜೆ ಹಿರಿಯ ಸಿವಿಲ್ ನ್ಯಾಯಾಧೀಶರು ಎಲ್ಲಾ ಆರೋಪಿಗಳಿಗೆ 2 ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ 10 ಸಾವಿರ ದಂಡ ರೂ. ವಿಧಿಸಿ ಆದೇಶ ನೀಡಿದ್ದಾರೆ.
