ಮಾ.6ರಂದು ಅಕ್ಕಿ ಮುಹೂರ್ತ
Saturday, March 1, 2025
ಲೋಕಬಂಧು ನ್ಯೂಸ್
ಉಡುಪಿ: 2026ರ ಜ.18ರಿಂದ 2028ರ ಜ.18ರ ವರೆಗೆ ನಡೆಯುವ ಶೀರೂರು ಮಠದ ಪರ್ಯಾಯೋತ್ಸವದ ಪೂರ್ವಭಾವಿಯಾಗಿ ನಡೆಯುವ 4 ಮುಹೂರ್ತಗಳ ಪೈಕಿ 2ನೇ ಮುಹೂರ್ತವಾದ ಅಕ್ಕಿ ಮುಹೂರ್ತ ಮಾರ್ಚ್ 6ರಂದು ನಡೆಯಲಿದೆ ಎಂದು ಭಾವಿ ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ತಿಳಿಸಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಉಡುಪಿಯ ಶ್ರೀಕೃಷ್ಣ ಅನ್ನಬ್ರಹ್ಮ ಎಂದೇ ಖ್ಯಾತಿ ಪಡೆದಿದ್ದಾನೆ. ಇಲ್ಲಿ ಅನ್ನದಾನಕ್ಕೆ ಬಹಳ ಮಹತ್ವ ಇದೆ. ಈ ಹಿನ್ನೆಲೆಯಲ್ಲಿ 2 ವರ್ಷ ಕಾಲ ಅನ್ನದಾನಕ್ಕೆ ಅಗತ್ಯವಾದ ಅಕ್ಕಿ ಸಂಗ್ರಹಿಸುವ ಈ ಮುಹೂರ್ತಕ್ಕೂ ವಿಶೇಷ ಪ್ರಾಧಾನ್ಯತೆ ಇದೆ. ಆದ್ದರಿಂದ ಈ ಕಾರ್ಯಕ್ರಮದಲ್ಲಿ ಎಲ್ಲಾ ಅಷ್ಟಮಠಾಧೀಶರು ಭಾಗವಹಿಸುತ್ತಾರೆ. ಉಡುಪಿಯ ಎಲ್ಲಾ ನಾಗರಿಕರು ಇದರಲ್ಲಿ ಭಾಗವಹಿಸಿ ಶ್ರೀಕೃಷ್ಣನ ಕೃಪೆಗೆ ಪಾತ್ರರಾಗಬೇಕು ಎಂದು ಶ್ರೀಗಳು ಹೇಳಿದರು.
ಶೀರೂರು ಮಠದ ದಿವಾನ ಡಾ. ಉದಯಕುಮಾರ್ ಸರಳತ್ತಾಯ ಮಾತನಾಡಿ, ಅಂದು ಮುಂಜಾನೆ 6 ಗಂಟೆಗೆ ಎಲ್ಲಾ ಮಠಗಳಿಗೆ ತೆರಳಿ ಆಯಾ ಮಠಾಧೀಶರನ್ನು ಮುಹೂರ್ತಕ್ಕೆ ಬರಮಾಡಿಕೊಳ್ಳಲಾಗುತ್ತದೆ. 9 ಗಂಟೆಗೆ ಶೀರೂರು ಮಠದಲ್ಲಿ ಶ್ರೀ ವಿಠಲ ದೇವರಿಗೆ ಸಾಮೂಹಿಕ ಪ್ರಾರ್ಥನೆ ನಡೆಸಲಾಗುತ್ತದೆ. ನಂತರ ರಥಬೀದಿಯಲ್ಲಿ ಅನಂತೇಶ್ವರ- ಚಂದ್ರಮೌಳೀಶ್ವರ, ಕೃಷ್ಣಮಠದಲ್ಲಿ ಶ್ರೀಕೃಷ್ಣ- ಮುಖ್ಯಪ್ರಾಣ, ಮಧ್ವಾಚಾರ್ಯರ ಸನ್ನಿಧಾನ, ಸಿಂಹಾಸನ, ಬೃಂದಾವನ, ನವಗ್ರಹಗಳಿಗೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ.
ಅಲ್ಲಿಂದ ಸಂಸ್ಕೃತ ಕಾಲೇಜು ವೃತ್ತಕ್ಕೆ ತೆರಳಿ, ಅಲ್ಲಿ ಸಂಗ್ರಹಿಸಲಾದ ಅಕ್ಕಿ ಮುಡಿಗಳನ್ನು ಚಿನ್ನದ ಪಲ್ಲಕಿಯಲ್ಲಿಟ್ಟು ರಥಬೀದಿಗೆ ತಂದು, ರಥಬೀದಿಯಲ್ಲಿ ಪ್ರದಕ್ಷಿಣೆ ಬಳಿಕ 10.45ಕ್ಕೆ ಶೀರೂರು ಮಠ ಪ್ರವೇಶಿಸಲಾಗುವುದು. 11.10ರ ಸುಮೂರ್ಹದಲ್ಲಿ ಎಲ್ಲಾ ಮಠಾಧೀಶರು ಮತ್ತು ಗಣ್ಯರ ಉಪಸ್ಥಿತಿಯಲ್ಲಿ ಮುಷ್ಟಿ ಅಕ್ಕಿ ಸಮರ್ಪಣೆ ಮೂಲಕ ಅಕ್ಕಿ ಮುಹೂರ್ತ ನಡೆಸಲಾಗುತ್ತದೆ.
ಭಕ್ತರು ಕೊಟ್ಟದ್ದನ್ನು ಶ್ರೀಕೃಷ್ಣ ಸ್ವೀಕಾರ ಮಾಡುತ್ತಾನೆ ಎಂಬ ಪರಿಕಲ್ಪನೆಯಡಿ ಈ ಮುಹೂರ್ತ ನಡೆಸಲಾಗುತ್ತದೆ ಎಂದರು. ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಉಡುಪಿಯ ಪರ್ಯಾಯ ಎಂದರೆ ನಾಡಹಬ್ಬ, ಇದು ಜನರ ಹಬ್ಬ. ಆದ್ದರಿಂದ ಉಡುಪಿಯ ಜನರೆಲ್ಲರೂ ಈ ಮುಹೂರ್ತದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭಾಧ್ಯಕ್ಷ ಪ್ರಭಾಕರ ಪೂಜಾರಿ, ಉದ್ಯಮಿ ಉದಯಕುಮಾರ್ ಶೆಟ್ಟಿ ಮುನಿಯಾಲು, ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ರಮೇಶ್ ಕಾಂಚನ್, ಗಣೇಶ್ ನೇರ್ಗಿ, ಕೃಷ್ಣಮೂರ್ತಿ ಆಚಾರ್ಯ, ಸಂಧ್ಯಾ ರಮೇಶ್, ಮೋಹನ ಭಟ್ ಇದ್ದರು.