ಆರೋಪ ಸುಳ್ಳು ಎಂದು ಸರಕಾರ ಸಾಬೀತು ಮಾಡಿದೆ
Monday, March 3, 2025
ಲೋಕಬಂಧು ನ್ಯೂಸ್
ಬೆಂಗಳೂರು: ಬಜೆಟ್‌ನಲ್ಲಿ ಮಾಡಿದ್ದ 334 ಘೋಷಣೆಗಳ ಪೈಕಿ 331 ಘೋಷಣೆಗಳಿಗೆ ಸರ್ಕಾರಿ ಆದೇಶ ಆಗಿದೆ ಎಂದು ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಹೇಳಿದ್ದಾರೆ.ಕರ್ನಾಟಕ ವಿಧಾನಮಂಡಲ ಬಜೆಟ್ ಅಧಿವೇಶನದಲ್ಲಿ ವಿಧಾನಸಭೆ ಮತ್ತು ಪರಿಷತ್ ಸದಸ್ಯರನ್ನು ಒಳಗೊಂಡ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದರು. ಸರ್ಕಾರ ವೇಗದ ಗತಿಯಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿದೆ. ರಾಜ್ಯದ ಆಯವ್ಯಯ ವೃದ್ಧಿಯಾಗುತ್ತಿದೆ. ರಾಜ್ಯದಲ್ಲಿ ಉತ್ತಮ ಮಳೆ ಆಗಿದ್ದರಿಂದ ಉತ್ತಮ ಫಸಲು ಬಂದಿದೆ. ರಾಜ್ಯ ಸರ್ಕಾರ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಗ್ಯಾರಂಟಿಯಿಂದ ರಾಜ್ಯ ದಿವಾಳಿ ಆಗುತ್ತೆ ಎಂದು ಹೇಳುತ್ತಿದ್ದರು. ಎಲ್ಲ ಆರೋಪಗಳು ಸುಳ್ಳು ಎಂದು ಸರ್ಕಾರ ಸಾಬೀತು ಮಾಡಿದೆ.
ಸರ್ಕಾರ ಕಟ್ಟಕಡೆಯ ವ್ಯಕ್ತಿಗೂ ಯೋಜನೆಯನ್ನು ತಲುಪಿಸಿದೆ. ಜಿಎಸ್ಟಿ ಸಂಗ್ರಹದಲ್ಲೂ ರಾಜ್ಯ ಸರ್ಕಾರ ಮುಂಚೂಣಿಯಲ್ಲಿದೆ. ಕೆಎಂಎಫ್ನಿಂದ ಅತಿ ಹೆಚ್ಚು ಪಾಲು ಸಂಗ್ರಹವಾಗುತ್ತಿದೆ, ಸಾಮಾಜಿಕ ಪಿಂಚಣಿ ಯೋಜನೆ ಸೇರಿ ನೇರ ನಗದು – ಸಬ್ಸಿಡಿ ಪ್ರೋತ್ಸಾಹದಿಂದ 1.25 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಅನುಕೂಲ ಆಗಿದೆ. 13 ಸಾವಿರ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗಿದೆ. ಉನ್ನತ ಶಿಕ್ಷಣದಲ್ಲಿ 1,088 ಸಹಾಯಕ ಪ್ರಾಧ್ಯಾಪಕರ ನೇಮಕ ಮಾಡಲಾಗಿದೆ. 8,311 ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ, ಕಳೆದ 19 ತಿಂಗಳಲ್ಲಿ ಗಂಭೀರವಾದ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳೇನು ಉದ್ಭವಿಸಿಲ್ಲ. ಪೊಲೀಸ್ ಠಾಣೆಗಳು ಜನಸ್ನೇಹಿಯಾಗಿ ಕೆಲಸ ಮಾಡುತ್ತಿವೆ.
ಸರ್ಕಾರ ಬಂದಾಗಿನಿಂದ ಗ್ಯಾರಂಟಿ ಯೋಜನೆಗಳಿಗೆ 70,000 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ವರ್ಷಕ್ಕೆ 90,000 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗುತ್ತಿದೆ. ಸರ್ಕಾರ ಅಭಿವೃದ್ಧಿ ವೇಗ ಸದೃಢಗೊಳಿಸಿದೆ. ಆಡಳಿತ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವ ಅವಕಾಶವಾಗಿ ಬಳಕೆಗೆ ಬದ್ಧವಾಗಿದೆ ಎಂದು ಸರ್ಕಾರದ ಸಾಧನೆಗಳನ್ನ ವಿವರಿಸಿದರು.