ಲೋಕಬಂಧು ನ್ಯೂಸ್, ಬೈಂದೂರು
ಬೈಂದೂರಿನಲ್ಲಿ ಮೊಟ್ಟಮೊದಲ ಬಾರಿಗೆ ಮೂರು ದಿನಗಳ ಹಲಸು ಮತ್ತು ಕೃಷಿ ಮೇಳ ಜೂನ್ 27ರಿಂದ 29ರ ವರೆಗೆ ಇಲ್ಲಿನ ಯಡ್ತರೆ ಬಂಟರ ಭವನದಲ್ಲಿ ನಡೆಯಲಿದೆ.
ಬೈಂದೂರು ಉತ್ಸವ ಸಮಿತಿ ಹಾಗೂ ರೈತೋತ್ಥಾನ ಬಳಗ ನೇತೃತ್ವದಲ್ಲಿ ಸಮಷ್ಟಿ ಪ್ರತಿಷ್ಠಾನ ಹಾಗೂ ರೋಟರಿ ಕ್ಲಬ್ ಬೈಂದೂರು ಸಹಯೋಗದೊಂದಿಗೆ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ತಳಿಯ ಹಲಸು ಮತ್ತು ಮಾವಿನ ಹಣ್ಣಿನ ಪ್ರದರ್ಶನ ಹಾಗೂ ಮಾರಾಟ, ರುಚಿಕರ ಹಲಸಿನ ಉಪ ಉತ್ಪನ್ನಗಳು ಸವಿ ಉಣಬಡಿಸುವ ಜೊತೆಗೆ ಸಾಧಕ ಕೃಷಿಕರಿಗೆ ಸನ್ಮಾನ ಇತ್ಯಾದಿ ಹಮ್ಮಿಕೊಳ್ಳಲಾಗಿದೆ.
ಮೇಳವನ್ನು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಉದ್ಘಾಟಿಸಲಿದ್ದು, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಸೇರಿದಂತೆ ವಿವಿಧ ಅತಿಥಿ ಗಣ್ಯರು ಭಾಗವಹಿಸುವರು. ಈ ವೇಳೆ ಸ್ಥಳೀಯ ಸಾಧಕ ಕೃಷಿಕರಿಗೆ ಸನ್ಮಾನ, ಆಧುನಿಕ ಕೃಷಿ ಮಾಹಿತಿ ಕಾರ್ಯಾಗಾರ ನಡೆಯಲಿದೆ.
ಮೂರು ದಿನಗಳಲ್ಲೂ ವಿವಿಧ ತಳಿಯ ಹಲಸು ಮತ್ತು ಮಾವಿನ ಹಣ್ಣಿನ ಪ್ರದರ್ಶನ ಇರಲಿದ್ದು, ವಿಶೇಷವಾಗಿ ಮೇಳವನ್ನು ಆಯೋಜಿಸಲಾಗಿದೆ. ಹತ್ತಾರು ಹಲಸು ಮತ್ತು ಮಾವಿನ ಉಪ ಉತ್ಪನ್ನಗಳ ಮಳಿಗೆ, ಹಣ್ಣಿನ ಖಾದ್ಯಗಳ ಮಳಿಗೆ ಹಾಗೂ ಇತರ ಆಹಾರ ಮಳಿಗೆ, ವಿವಿಧ ತಳಿಯ ಹಲಸು ಮತ್ತು ಮಾವಿನ ಗಿಡಗಳು ಮತ್ತು ಇತರ ಹಣ್ಣು, ಹೂವಿನ ಗಿಡಗಳ ಪ್ರದರ್ಶನ ಮಾರಾಟ ಮಳಿಗೆ, ತರಕಾರಿ ಬೀಜದ ಮಳಿಗೆ, ಕೃಷಿ ಯಂತ್ರೋಪಕರಣ ಮತ್ತು ಗೊಬ್ಬರ ಮಾರಾಟ ಮಳಿಗೆ, ಕರಕುಶಲ ಹಾಗೂ ನೇಯ್ಗೆ ಬಟ್ಟೆ ಮಳಿಗೆ, ಇತರ ಗೃಹಪಯೋಗಿ ವಸ್ತುಗಳ ಮಳಿಗೆ ಪ್ರದರ್ಶನದಲ್ಲಿ ಇರಲಿದೆ ಎಂದು ಸಂಘಟಕ ಶ್ರೀಧರ ಮರವಂತೆ (94821 89216) ತಿಳಿಸಿದ್ದಾರೆ.

