ಹೆತ್ತ ತಾಯಿಯನ್ನೇ ಕತ್ತು ಹಿಸುಕಿ ಕೊಲೆಗೈದ ಶಂಕೆ

ಲೋಕಬಂಧು ನ್ಯೂಸ್, ಉಡುಪಿ
ಸೊಂಟ ನೋವಿನಿಂದ ಬಳಲುತ್ತಿದ್ದ ಮಹಿಳೆಯೋರ್ವರನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. 45 ವರ್ಷದ ಪದ್ಮಾಬಾಯಿ ಮೃತ ದುರ್ದೈವಿಯಾಗಿದ್ದು, ಅವರ ಮಗಳೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಇನ್ನೊಬ್ಬ ಮಗಳು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.ಪದ್ಮಾಬಾಯಿ ತನ್ನ ಮಗಳು ಮೀರಾಬಾಯಿಗೆ ಕರೆ ಮಾಡಿ 'ನನಗೆ ಸೊಂಟ ನೋವು ಆಗುತ್ತಿದೆ. ಏಳಲು ಸಾಧ್ಯವಾಗುತ್ತಿಲ್ಲ' ಎಂದು ತಿಳಿಸಿದ್ದು, ಸರ್ಕಾರಿ ಆಸ್ಪತ್ರೆ ಬದಲಿಗೆ ಮಲ್ಪೆಯಲ್ಲಿರುವ ಒಳ್ಳೆಯ ವೈದ್ಯರ ಬಳಿ ತಪಾಸಣೆ ಮಾಡುವುದಾಗಿ ತಿಳಿಸಿದರು ಎನ್ನಲಾಗಿದೆ.


ಅದಕ್ಕೆ ತಾಯಿ ಆರ್ಥಿಕ ಪರಿಸ್ಥಿತಿ ಹೇಳಿಕೊಂಡಿದ್ದರೂ ವೈದ್ಯರಲ್ಲಿ ತಪಾಸಣೆ ನಡೆಸಿ, ರಾತ್ರಿ ಮನೆಗೆ ಕರೆದುಕೊಂಡು ಹೋಗಿ, ತಾಯಿಯ ಚಿಕಿತ್ಸೆಗೆ ಹಣ ಹಾಕುವಂತೆ ಮೀರಾಬಾಯಿ ಮಗ, ಚಿಕ್ಕಮ್ಮ (ಇನ್ನೊಬ್ಬ ಮಗಳು) ಶಿಲ್ಪಾ ಅವರಿಗೆ ಕರೆ ಮಾಡಿದ್ದಾನೆ.


ಮರುದಿನ ಬೆಳಿಗ್ಗೆ ತಾಯಿ ಎದ್ದೇಳದೇ ಇರುವುದನ್ನು ನೋಡಿ ಜಿಲ್ಲಾಸ್ಪತ್ರೆಗೆ ದಾಖಲಿಸಿದಾಗ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢೀಕರಿಸಿದರು.


ತಾಯಿಯ ಕುತ್ತಿಗೆ ಬಳಿ ಕೆಂಪಾಗಿದ್ದು ಒತ್ತಿ ಕೊಲೆ ಮಾಡಿರುವ ಸಂಶಯ ಇದೆ ಎಂದು ಶಿಲ್ಪಾ ಅವರು ಮಣಿಪಾಲ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.