
Udupi: ಪರಶುರಾಮ ಮೂರ್ತಿ ಪುನರ್ ನಿರ್ಮಾಣಕ್ಕೆ ಪಿಐಎಲ್
Monday, August 4, 2025
ಲೋಕಬಂಧು ನ್ಯೂಸ್, ಉಡುಪಿ
ಕಾರ್ಕಳ ತಾಲೂಕಿನ ಬೈಲೂರು ಉಮಿಕಲ್ ಬೆಟ್ಟದಲ್ಲಿ ಮತ್ತೆ ಪರಶುರಾಮ ಮೂರ್ತಿ ನಿರ್ಮಿಸುವಂತೆ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ (ಪಿಐಎಲ್) ಸಲ್ಲಿಸಿರುವುದಾಗಿ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಹೇಳಿದರು.
ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಗೆಲ್ಲಬೇಕು ಎನ್ನುವ ದುರಾಲೋಚನೆಯಿಂದ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಪರಶುರಾಮ ಮೂರ್ತಿ ನಿರ್ಮಾಣ ಮಾಡಿ ಕಾರ್ಕಳದ ಜನತೆ ಮತ್ತು ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ಜನರ ನಂಬಿಕೆ ಉಳಿಯಬೇಕಾದರೆ ಅಲ್ಲಿ ಮತ್ತೆ ಪರಶುರಾಮ ಮೂರ್ತಿ ನಿರ್ಮಾಣವಾಗುವುದು ಅನಿವಾರ್ಯವಾಗಿದೆ. ಈ ಕಾರಣಕ್ಕೆ ಮೂರ್ತಿ ಪುನರ್ ನಿರ್ಮಾಣ ಕೋರಿ ಹೈಕೋರ್ಟ್'ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೇನೆ ಎಂದರು.
`ನಾನು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದರಿಂದ ಶಾಸಕರು ಆತಂಕಗೊಂಡಿದ್ದಾರೆ. ಅದಕ್ಕಾಗಿ ಅರ್ಜಿಗೆ ವಿನಾಕಾರಣ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಕಂಚಿನ ಮೂರ್ತಿ ನಿರ್ಮಾಣ ಮಾಡುವುದಾಗಿ ಜನತೆಗೆ ಮಾತು ನೀಡಿದ್ದ ಶಾಸಕ ಸುನಿಲ್ ಕುಮಾರ್, ಕಂಚಿನಿಂದ ಮೂರ್ತಿ ನಿರ್ಮಿಸದೇ ಫೈಬರ್ ಮತ್ತಿತರ ವಸ್ತುಗಳಿಂದ ನಿರ್ಮಾಣ ಮಾಡಿರುವುದು ಜನರಿಗೆ ಎಸಗಿದ ದ್ರೋಹ ಎಂದು ಉದಯ ಕುಮಾರ್ ಹೇಳಿದರು.
ಕಂಚಿನಿಂದಲೇ ಪ್ರತಿಮೆ ನಿರ್ಮಾಣ ಮಾಡಲಾಗಿದೆ ಎಂದು ಶಾಸಕರು ಸಮರ್ಥನೆ ಮಾಡುತ್ತಾ ಬಂದಿದ್ದಾರೆ. ಆದರೆ, ಪೊಲೀಸರು ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಮೂರ್ತಿ ಕಂಚಿನ್ನದ್ದಲ್ಲ ಎಂಬ ವಿಚಾರ ಬಹಿರಂಗವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಕೃಷ್ಣಮೂರ್ತಿ ಆಚಾರ್ಯ, ಸೂರಜ್ ಶೆಟ್ಟಿ, ಸುಬಿತ್ ಉಪಸ್ಥಿತರಿದ್ದರು.