
Dharmastala: ಹೆಗ್ಗಡೆಯವರನ್ನು ಬೆಂಬಲಿಸುವುದು ಜೈನ ಸಮಾಜದ ಕರ್ತವ್ಯ
Saturday, August 23, 2025
ಲೋಕಬಂಧು ನ್ಯೂಸ್, ಧರ್ಮಸ್ಥಳ
ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆ ಹೊಂದಿರುವ ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳ ಚರ್ತುವಿಧ ದಾನ ಪರಂಪರೆಯೊಂದಿಗೆ ವಿಶ್ವ ವಿಖ್ಯಾತವಾಗಿದೆ. ಕ್ಷುಲ್ಲಕ ಕಾರಣದಿಂದ ಸಾಮಾಜಿಕ ಮಾಧ್ಯಮಗಳ ಅಪಪ್ರಚಾರದಿಂದ ಎಲ್ಲರಿಗೂ ತೀವ್ರ ದುಃಖವಾಗಿದೆ. ಧರ್ಮಸ್ಥಳದ ಭವ್ಯ ಪರಂಪರೆ ಹಾಗೂ ಹೆಗ್ಗಡೆಯವರ ಬಹುಮುಖಿ ಸಮಾಜಸೇವಾ ಕಾರ್ಯಗಳನ್ನು ಬೆಂಬಲಿಸಿ ಸಕ್ರಿಯ ಸಹಕಾರ ನೀಡುವುದು ಸಮಗ್ರ ಜೈನ ಸಮಾಜದ ಕರ್ತವ್ಯ ಎಂದು ಕಾರ್ಕಳ ಜೈನ ಮಠದ ಶ್ರೀ ಲಲಿತಕೀರ್ತಿ ಭಟ್ಟಾರಕರು ಹೇಳಿದರು.
ಕಲುಷಿತಗೊಂಡ ನೀರನ್ನು ಮತ್ತೆ ತಿಳಿಯಾಗಿ ಪರಿಶುದ್ಧಗೊಳಿಸುವುದು ನಮ್ಮೆಲ್ಲರ ಕರ್ತವ್ಯ. ಅಪಪ್ರಚಾರ, ಆರೋಪಗಳೆಲ್ಲ ದೂರವಾಗಲಿ. ಹೆಗ್ಗಡೆಯವರಿಗೆ ಎಲ್ಲಾ ದೈವ-ದೇವರು ದೀರ್ಘಾಯುರಾರೋಗ್ಯ ನೀಡಿ ಇನ್ನಷ್ಟು ಲೋಕಕಲ್ಯಾಣ ಕಾರ್ಯ ಮಾಡುವಂತೆ ಹರಸಲಿ ಎಂದು ಸ್ವಾಮೀಜಿ ಪ್ರಾರ್ಥಿಸಿದರು.
ಕಾರ್ಕಳ ಸೀಮೆಯ ಎಲ್ಲಾ ಬಸದಿಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಪುರೋಹಿತರು ತಂದ ಪ್ರಸಾದವನ್ನು ಹೆಗ್ಗಡೆಯವರಿಗೆ ನೀಡಿದರು.
ಕಾರ್ಕಳ ಮಠದ ಬಸದಿಯ ವಿಶೇಷ ಪ್ರಸಾದವನ್ನು ಹೆಗ್ಗಡೆಯವರಿಗೆ ಸ್ವಾಮೀಜಿ ನೀಡಿ ಶುಭ ಹಾರೈಸಿದರು.
ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರಕುಮಾರ್ ಮಾತನಾಡಿ, ಸತ್ಯಕ್ಕೆ ಸದಾ ಜಯವಿದೆ. ಮಾತು ಬಿಡ ಮಂಜುನಾಥ ಎಂಬ ಮಾತು ಎಲ್ಲರಿಗೂ ಚಿರಪರಿಚಿತವಾಗಿದೆ. ಸತ್ಯ ಪ್ರಕಟವಾಗುವುದರೊಂದಿಗೆ ಆರೋಪಿಗಳಿಗೆ ಶಿಕ್ಷೆಯಾಗಲಿ. ಹೆಗ್ಗಡೆಯವರ ಜೊತೆ ನಾವೆಲ್ಲ ಸದಾ ಪೂರ್ಣ ಬೆಂಬಲ ನೀಡಲು ಸಿದ್ಧರು, ಬದ್ಧರು ಎಂದು ಭರವಸೆ ನೀಡಿದರು.
ಹೇಮಾವತಿ ವೀ. ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.
ಶಿರ್ತಾಡಿ ಎಸ್.ಡಿ. ಸಂಪತ್ ಸಾಮ್ರಾಜ್ಯ, ಸುದರ್ಶನ ಜೈನ್ ಬಂಟ್ವಾಳ, ಪುಷ್ಪರಾಜ ಜೈನ್ ಮಂಗಳೂರು, ಕುಲದೀಪ್ ಚೌಟರ ಅರಮನೆ ಮೂಡುಬಿದಿರೆ, ಅಂಡಾರು ಮಹಾವೀರ ಹೆಗ್ಡೆ, ಅನಂತ್ರಾಜ ಪೂವಣಿ, ಶಿಶುಪಾಲ ಜೈನ್, ಮೋಹನ ಪಡಿವಾಳ್, ನಿವೃತ್ತ ಪ್ರಾಂಶುಪಾಲ ಗುಣಪಾಲ ಕಡಂಬ, ಗುಣವರ್ಮ ಜೈನ್ ಕಾರ್ಕಳ, ನೇಮಿರಾಜ ಆರಿಗ ಮೊದಲಾದವರಿದ್ದರು.
ತಮ್ಮ ಬಗ್ಗೆ ಹಾಗೂ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಸಮಾಜ ಬಾಂಧವರ ಭಕ್ತಿ ಗೌರವ, ಅಭಿಮಾನ ಸದಾ ಇದೇ ರೀತಿ ಇರಲಿ ಎಂದು ಆಶಿಸಿ ಹೆಗ್ಗಡೆಯವರು ಎಲ್ಲರಿಗೂ ಶುಭ ಹಾರೈಸಿದರು.
ಕಾರ್ಕಳ ಸೀಮೆಯಿಂದ ಸುಮಾರು ಮುನ್ನೂರು ಮಂದಿ ಶ್ರಾವಕ ಶ್ರಾವಕಿಯರು ಆಗಮಿಸಿದ್ದರು.