Udupi: ದುಶ್ಚಟಗಳಿಂದ ದೂರವಿದ್ದಾಗ ಸ್ವಸ್ಥ ಸಮಾಜ ನಿರ್ಮಾಣ
Saturday, August 2, 2025
ಲೋಕಬಂಧು ನ್ಯೂಸ್, ಉಡುಪಿ
ಜನಸಾಮಾನ್ಯರು ದುಶ್ಚಟಗಳಿಂದ ದೂರವಿದ್ದಾಗ ಮಾತ್ರ ಉತ್ತಮ ಆರೋಗ್ಯ ಹೊಂದಿ, ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಎಲುಬು ಮತ್ತು ಮೂಳೆ ತಜ್ಞ ಹಾಗೂ ಭಾರತೀಯ ವೈದ್ಯಕೀಯ ಸಂಘ (ಐ.ಎಂ.ಎ) ಉಡುಪಿ- ಕರಾವಳಿ ಅಧ್ಯಕ್ಷ ಡಾ.ಕೆ. ಸುರೇಶ್ ಶೆಣೈ ಹೇಳಿದರು.ಶುಕ್ರವಾರ ನಗರದ ಐ.ಎಂ.ಎ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಇಲಾಖೆ, ಭಾರತೀಯ ವೈದ್ಯಕೀಯ ಸಂಘ (ಐ.ಎಂ.ಎ) ಉಡುಪಿ- ಕರಾವಳಿ, ವಿದ್ಯಾರತ್ನ ನರ್ಸಿಂಗ್ ಕಾಲೇಜು ಉಡುಪಿ ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಸಂಯುಕ್ತಾಶ್ರಯದಲ್ಲಿ ಡಾ.ಮಹಾಂತ ಶಿವಯೋಗಿ ಸ್ವಾಮೀಜಿ ಜನ್ಮದಿನದ ಅಂಗವಾಗಿ ನಡೆದ ವ್ಯಸನ ಮುಕ್ತ ದಿನಾಚರಣೆ ಉದ್ಘಾಟಿಸಿ, ಡಾ.ಮಹಾಂತ ಶಿವಯೋಗಿ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಡಾ.ಮಹಾಂತ ಶಿವಯೋಗಿ ಸ್ವಾಮೀಜಿ ಸಾಲಿನಲ್ಲಿ ಜೋಳಿಗೆ ಅಭಿಯಾನದ ಮೂಲಕ ಜನರಲ್ಲಿದ್ದ ದುಶ್ಚಟಗಳನ್ನು ಭಿಕ್ಷೆ ರೀತಿಯಲ್ಲಿ ಜೋಳಿಗೆಗೆ ಹಾಕಿಸಿಕೊಂಡು ಅವರ ಮನಪರಿವರ್ತಿಸಿ, ಪ್ರತಿಜ್ಞೆ ಪಡೆದು ದುಶ್ಚಟಗಳಿಂದ ದೂರ ಉಳಿಯುವಂತೆ ಮಾಡಿ, ವ್ಯಸನಿಗಳು ತಮ್ಮ ಕುಟುಂಬದ ಸದಸ್ಯರೊಂದಿಗೆ ನೆಮ್ಮದಿಯ ಜೀವನ ನಡೆಸುವ ಸಮಾಜಮುಖಿ ಕಾರ್ಯ ಮಾಡಿದರು.
ಅವರ ಜನ್ಮದಿನವನ್ನು ಸರ್ಕಾರ ವ್ಯಸನ ಮುಕ್ತ ದಿನವಾಗಿ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
ಯುವಜನತೆ ಆರಂಭದಲ್ಲಿ ಸ್ನೇಹಿತರ ಒತ್ತಡಕ್ಕೆ ಮಣಿದು ಅಲ್ಪ ಪ್ರಮಾಣದಲ್ಲಿ ಅಮಲು ಪದಾರ್ಥ ಸೇವನೆ ಮಾಡುತ್ತಾರೆ. ನಂತರದ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ದುಶ್ಚಟಗಳಿಗೆ ದಾಸರಾಗುತ್ತಾರೆ. ಅದಕ್ಕೆ ಆಸ್ಪದ ನೀಡಬಾರದು ಎಂದರು.
ಡಾ.ಎ.ವಿ ಬಾಳಿಗ ಆಸ್ಪತ್ರೆಯ ಮನೋವೈದ್ಯ ಡಾ.ಪಿ.ವಿ. ಭಂಡಾರಿ ಉಪನ್ಯಾಸ ನೀಡಿ, ಒಮ್ಮೆ ದುಶ್ಚಟದ ಚಕ್ರವ್ಯೂಹದಲ್ಲಿ ಸಿಲುಕಿದರೆ ಅದರಿಂದ ಹೊರಬರುವುದು ಕಷ್ಟ. ಅನೇಕ ಜನರು ದುಶ್ಚಟಗಳಿಂದಲೇ ತಮ್ಮ ಪ್ರಾಣ ಕಳೆದುಕೊಂಡರೆ, ಅನೇಕರು ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಾರೆ.
ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಿದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಒಬ್ಬರಿಂದಲೇ ಸಮಾಜ ಬದಲಾವಣೆ ಅಸಾಧ್ಯ ಎಂದರು.
ಮೊಬೈಲ್'ನಿಂದ ದೂರವಿರಿ
ಆಧುನಿಕ ಯುಗದಲ್ಲಿ ಮೊಬೈಲ್'ನ ಸೋಷಿಯಲ್ ಮೀಡಿಯಾಗಳಲ್ಲಿ ರೀಲ್ಸ್'ಗಳನ್ನು ನಿರಂತರವಾಗಿ ನೋಡುವುದೂ ಒಂದು ವ್ಯಸನವಾಗಿದ್ದು, ಅದರಿಂದ ದೂರವಿರಬೇಕು. ಅಗತ್ಯಕ್ಕೆ ಮಾತ್ರ ಮೊಬೈಲ್ ಬಳಕೆ ಮಾಡಬೇಕು. ಅವುಗಳಲ್ಲಿ ಬರುವ ಮಾಹಿತಿಗಳು ಬಹುತೇಕ ಸುಳ್ಳಿನಿಂದ ಕೂಡಿರುತ್ತವೆ. ಅವುಗಳಿಗೆ ಮಾರುಹೋಗಬಾರದು ಎಂದು ಡಾ.ಪಿ.ವಿ. ಭಂಡಾರಿ ತಿಳಿಸಿದರು.
ದೇಹಕ್ಕೆ ಹಾನಿಕರವಾದ ಮದ್ಯಪಾನ, ತಂಬಾಕು ಉತ್ಪನ್ನ, ಅಮಲು ಬರಿಸುವ ಡ್ರಗ್ಸ್ ಸೇವನೆ ಮತ್ತಿತರ ದುಶ್ಚಟಗಳಿಂದ ದೂರವಿರಬೇಕು. ಮಾನಸಿಕ ಮತ್ತು ದೈಹಿಕವಾಗಿ ಸುಸ್ಥಿತಿಯಲ್ಲಿರುವುದು ನೈಜ ಆರೋಗ್ಯ.
ಮನುಷ್ಯನ ಆಲೋಚನೆಗಳನ್ನು ಬದಲಿಸುವ ಕಾರ್ಯ ಮೆದುಳಿಗೆ ಇದೆ. ಮಾದಕ ವಸ್ತುಗಳ ಬಳಕೆಯಿಂದ ಮೆದುಳಿನಲ್ಲಿ ನೈಸರ್ಗಿಕವಾಗಿ ಉತ್ಪಾದನೆಯಾಗುವ ರಾಸಾಯನಿಕಗಳು ಮೆದುಳಿನ ಕಾರ್ಯ ವಿಧಾನ ಬದಲಿಸಿ, ಹೆಚ್ಚು ಉಲ್ಲಾಸವಾಗಿರುವಂತೆ ಪರಿಣಾಮ ಬೀರುತ್ತವೆ. ಆದ್ದರಿಂದ ಅವುಗಳಿಂದ ದೂರ ಇರುವುದು ಒಳಿತು ಎಂದು ಡಾ. ಭಂಡಾರಿ ತಿಳಿಸಿದರು.
ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ. ಪ್ರಾಸ್ತಾವಿಕವಾಗಿ ಮಾತನಾಡಿ, ಡಾ. ಮಹಾಂತ ಶಿವಯೋಗಿ ಸ್ವಾಮೀಜಿ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುವ ಜೊತೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಭೀಕರ ಬರಗಾಲ ಬಂದಾಗ ನೂರಾರು ಗಂಜಿಕೇಂದ್ರಗಳ ಮೂಲಕ ದಾಸೋಹ ಹಾಗೂ ಗೋಶಾಲೆಗಳನ್ನು ಆರಂಭಿಸಿದರು.
ದೇವದಾಸಿ ವಿಮೋಚನೆ, ವಿಧವೆಯರಿಗೆ ಕಾಯಕ ಕೈಗೊಳ್ಳಲು ಅನುಕೂಲವಾಗುವ ಕಾಯಕ ಸಂಜೀವಿನಿ ಸಂಸ್ಥೆ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯ ಮಾಡಿದರು. ಮಠದ ನೂರಾರು ಎಕರೆ ಜಮೀನನ್ನು ರೈತರಿಗೆ ಕೃಷಿಗಾಗಿ ನೀಡಿದರು ಎಂದರು.
ವಿದ್ಯಾರತ್ನ ಕಾಲೇಜಿನ ಪ್ರಾಂಶುಪಾಲೆ ಡಾ.ಅನಿತಾ ಸಿ. ರಾವ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಉಡುಪಿ ಸಿಟಿ ಎಜುಕೇಶನ್ ಟ್ರಸ್ಟ್ ಆಡಳಿತಾಧಿಕಾರಿ ರವಿ ಪಾಲನ್, ವಿದ್ಯಾರತ್ನ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಎಂ.ಕೆ. ರಮೇಶ್ ಮೊದಲಾದವರಿದ್ದರು.
ಸಹಾಯಕ ಉಪನ್ಯಾಸಕಿ ಶ್ರೀಲತಾ ನಿರೂಪಿಸಿ, ರಂಜಿತಾ ವಂದಿಸಿದರು.